ಬೆಂಗಳೂರು: ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಮಹಿಳಾ ಗ್ರಾಮ ಸಭೆಗಳನ್ನು ಮಾ. 8ರಿಂದ ಆಯೋಜಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನವಾದ ಮಾ. 8ರಿಂದ ಜೂನ್ 30ರವರೆಗೆ ಅಭಿಯಾನ ನಡೆಯಲಿದೆ. ಮಹಿಳೆಯರು ವಾರ್ಡ್ ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ, ಬೇಡಿಕೆ ಮಂಡಿಸಬಹುದಾಗಿದೆ. ಸ್ಥಳೀಯ ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳ ಸಹಭಾಗಿತ್ವದಲ್ಲಿ ವಿಶೇಷ ಚಟುವಟಿಕೆ ಕಾರ್ಯಕ್ರಮ ಆಯೋಜಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ 16 ವಾರಗಳ ಅವಧಿಯಲ್ಲಿ ವಾರಕ್ಕೆ ಒಂದರಂತೆ ಸಾಂಸ್ಕೃತಿಕ, ಮನರಂಜನೆ, ಕ್ರೀಡೆ, ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯ, ಮಹಿಳಾ ಕಾನೂನು ವಿಷಯಗಳು ಕುರಿತಾಗಿ ಕಾರ್ಯಕ್ರಮ ಆಯೋಜಿಸಬೇಕು. ಆರೋಗ್ಯ ಶಿಬಿರ, ವಸ್ತು ಪ್ರದರ್ಶನ, ಸಸಿ ನೆಡುವ ಕಾರ್ಯಕ್ರಮಗಳ ಆಯೋಜಿಸಲು ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಮಹಿಳೆಯರಿಗಾಗಿ ಗ್ರಾಮ ಸಭೆಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಸ್ನೇಹ ಗ್ರಾಮ ಪಂಚಾಯಿತಿ ಅಭಿಯಾನಕ್ಕೆ ಪೂರ್ವಭಾವಿಯಾಗಿ ಉಪಸಮಿತಿಗಳ ಸಭೆ ನಡೆಸುವಂತೆ ಸೂಚಿಸಿದ್ದಾರೆ.