ರೈಲಿನಲ್ಲಿ ನಿದ್ರಿಸುತ್ತಿದ್ದ ಪ್ರಯಾಣಿಕನಿಗೆ ಸಹಪ್ರಯಾಣಿಕನೊಬ್ಬ ಬಲವಂತವಾಗಿ ಮುತ್ತು ನೀಡಿದ ಹೇಯ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಯಾಣಿಕರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ನಿದ್ರೆಯಿಂದ ಎಚ್ಚರಗೊಂಡ ಪ್ರಯಾಣಿಕ ಆತನನ್ನು ಪ್ರಶ್ನಿಸಿದಾಗ, “ನನಗೆ ಇಷ್ಟವಾಯಿತು, ಹಾಗಾಗಿ ಮಾಡಿದೆ” ಎಂದು ಆತ ಉಡಾಫೆಯಿಂದ ಉತ್ತರಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕ ಆತನನ್ನು ತರಾಟೆಗೆ ತೆಗೆದುಕೊಂಡು, ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾನೆ.
ಈ ವೇಳೆ ಆರೋಪಿಯ ಪತ್ನಿ ವಿಷಯವನ್ನು ಲಘುವಾಗಿ ಪರಿಗಣಿಸಿ “ಬಿಡಿ, ದೊಡ್ಡ ವಿಷಯವೇನಲ್ಲ” ಎಂದು ಹೇಳಿದ್ದಾಳೆ. ಆದರೆ, ಸಂತ್ರಸ್ತ ಪ್ರಯಾಣಿಕ ಮಾತ್ರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರಿಗೆ ದೂರು ನೀಡಲು ಪಟ್ಟು ಹಿಡಿದಿದ್ದಾನೆ. ಈ ಘಟನೆ ಮಹಿಳೆಯೊಬ್ಬರಿಗೆ ನಡೆದಿದ್ದರೆ, ಎಲ್ಲರೂ ಆಕೆಯ ಪರವಾಗಿ ನಿಲ್ಲುತ್ತಿದ್ದರು ಎಂದು ಆತ ವಾದಿಸಿದ್ದಾನೆ.
ಪ್ರಯಾಣಿಕರ ಸಮ್ಮುಖದಲ್ಲೇ ನಡೆದ ಈ ಘಟನೆಗೆ ಯಾರು ಕೂಡಾ ಪ್ರತಿಕ್ರಿಯಿಸದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಸಮಾಜದಲ್ಲಿನ ಮೌನ ಪ್ರೇಕ್ಷಕರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.