
ವಿಜಯಪುರ: ಮಗು ಐಸಿಯುನಲ್ಲಿದ್ದರೂ ಕಾನ್ಸ್ಟೇಬಲ್ ಗೆ ರಜೆ ನೀಡದ ಆರೋಪ ಕೇಳಿ ಬಂದಿದೆ. ನನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ರಜೆ ಸಿಗಲಿಲ್ಲ. ಹೀಗಾಗಿ ಮಗು ಮೃತಪಟ್ಟಿದೆ ಎಂದು ಪೊಲೀಸ್ ಸಿಬ್ಬಂದಿ ಗ್ರೂಪ್ ನಲ್ಲಿ ಕಾನ್ಸ್ಟೇಬಲ್ ಮೆಸೇಜ್ ಹಾಕಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿ ಗ್ರೂಪ್ ನಲ್ಲಿ ಮೆಸೇಜ್ ಹಾಕಿ ಅಳಲು ತೋಡಿಕೊಂಡಿದ್ದಾರೆ. ಕೊನೆಗೂ ನನ್ನ ಮಗ ಉಳಿಯಲಿಲ್ಲ. ನನಗೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂದು ಮಗುವಿನ ಫೋಟೋ ಸಮೇತ ವಿಜಯಪುರ ನಗರದ ಗಾಂಧಿ ಚೌಕ ಠಾಣೆಯ ಕಾನ್ಸ್ಟೇಬಲ್ ಎ.ಎಸ್. ಬಂಡುಗೋಳ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದಾರೆ.
ಅವರ ಮಗು ಐಸಿಯುನಲ್ಲಿ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಆದರೆ ಬಂಡಗೋಳ್ ರಜೆ ಕೇಳಿಲ್ಲ ಎಂದು ಮೇಲಾಧಿಕಾರಿಗಳು ಹೇಳಿದ್ದಾರೆ. ಮೌಖಿಕ, ಲಿಖಿತವಾಗಿ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ನಿನ್ನೆ, ಇಂದು ಬಂಡಗೋಳ್ ಕರ್ತನಕ್ಕೆ ಹಾಜರಾಗಿಲ್ಲ. ಅವರ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ಮಾಹಿತಿ ಗೊತ್ತಾಗಿದೆ. ರಜೆಗಾಗಿ ಅವರು ಯಾವುದೇ ಮನವಿ ಮಾಡಿಲ್ಲ ಎಂದು ಘಟನೆ ಬಗ್ಗೆ ಗಾಂಧಿ ಚೌಕ ಠಾಣೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.