
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಅಧ್ಯಯನ ಸಮಿತಿ ಒಲವು ತೋರಿದೆ. 15 ದಿನದಲ್ಲಿ ವರದಿ ಸಲ್ಲಿಸಲಿದೆ. ರಾಜ್ಯ ಸರ್ಕಾರ ಸಮ್ಮತಿಸಿದಲ್ಲಿ 2.45 ಲಕ್ಷ ಸಿಬ್ಬಂದಿಯ ಹೋರಾಟಕ್ಕೆ ಗೆಲುವು ಸಿಗಲಿದೆ.
ಈ ಮೂಲಕ ಒಪಿಎಸ್ ಮರು ಜಾರಿಗೆ ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಜಯ ಸಿಗುವ ಲಕ್ಷಣ ಕಾಣಿಸುತ್ತಿದೆ. ಒಪಿಎಸ್ ಮರು ಜಾರಿ ಸಂಬಂಧ ರಚಿಸಿದ್ದ ಸಮಿತಿ ಮಾರ್ಚ್ ಅಂತಕ್ಕೆ ಇಲ್ಲವೇ 15 ದಿನಗಳಲ್ಲಿ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ವರದಿಯಲ್ಲಿ ಒಪಿಎಸ್ ಜಾರಿಗೆ ಪೂರಕ ಅಂಶಗಳನ್ನು ಉಲ್ಲೇಖಿಸಿ ಶಿಫಾರಸ್ಸು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯ ನಂತರ ನೇಮಕವಾದ 13,500 ನೌಕರರನ್ನು ಎನ್.ಪಿ.ಎಸ್.ನಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಉಳಿದ ನೌಕರರನ್ನು ಕೂಡ ಒಪಿಎಸ್‌ಗೆ ಒಳಪಡಿಸಲು ಶಿಫಾರಸು ಮಾಡಲಾಗುವುದು ಎಂದು ಹೇಳಲಾಗಿದೆ.
ಈಗಾಗಲೇ ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ, ಛತ್ತಿಸ್ಗಢದಲ್ಲಿ ಒಪಿಎಸ್ ಮರು ಜಾರಿ ಮಾಡಲಾಗಿದೆ.
ಒಪಿಎಸ್ ಜಾರಿಯಾದಲ್ಲಿ ನೌಕರರು ನಿವೃತ್ತಿಯ ವೇಳೆ ಹೊಂದಿದ್ದ ಮೂಲವೇತನದ ಶೇಕಡ 50ರಷ್ಟು ಪಿಂಚಣಿ ನೀಡಲಾಗುವುದು. ತುಟ್ಟಿ ಭತ್ಯೆ, ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ಗಳಿಕೆ ಅಥವಾ ಎರಡರಲ್ಲಿ ಒಂದನ್ನು ಪಡೆಯಲು ಅರ್ಹರಾಗಿರುತ್ತಾರೆ. ಹಳೆ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಿಲ್ಲ. ನಿವೃತ್ತಿಯ ನಂತರ ಕುಟುಂಬಕ್ಕೆ ಪಿಂಚಣಿಯ ಖಾತರಿ ಇರುತ್ತದೆ. ನಿವೃತ್ತರು ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಪಿಂಚಣಿ ಮುಂದುವರೆಯಲಿದೆ.