ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2000 ರೂಪಾಯಿ ಮುಖಬೆಲೆಯ ನೋಟುಗಳ ವಾಪಸಾತಿ ಕುರಿತು ಹೊಸ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಬಹುತೇಕ ನೋಟುಗಳು ವಾಪಸ್ ಮರಳಿದ್ದು, ಸಾರ್ವಜನಿಕರ ಬಳಿ ಕೆಲವೇ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಮಾತ್ರ ಉಳಿದಿವೆ ಎಂದು ಆರ್‌ಬಿಐ ತಿಳಿಸಿದೆ.
ಕಳೆದ ವರ್ಷ (2023) ಮೇ ತಿಂಗಳಲ್ಲಿ, ಆರ್‌ಬಿಐ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಆ ಸಮಯದಲ್ಲಿ, ಸುಮಾರು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂ. ನೋಟುಗಳು ಚಲಾವಣೆಯಲ್ಲಿದ್ದವು. ಈಗ, ಆರ್‌ಬಿಐ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 28, 2025 ರ ವರೆಗೆ ಕೇವಲ 6,471 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಮಾತ್ರ ಬಾಕಿ ಉಳಿದಿವೆ. ಆರ್‌ಬಿಐ ಪ್ರಕಟಣೆಯ ಪ್ರಕಾರ, ಚಲಾವಣೆಯಲ್ಲಿದ್ದ 2000 ರೂ. ನೋಟುಗಳಲ್ಲಿ ಶೇ. 98.18 ರಷ್ಟು ವಾಪಸ್ ಬಂದಿವೆ.
2000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡುವ ಸೌಲಭ್ಯವನ್ನು ಆರ್‌ಬಿಐ ಒದಗಿಸಿತ್ತು. ಈ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು. ಸದ್ಯ ಈ ಸೌಲಭ್ಯವು ಆರ್‌ಬಿಐನ 19 ವಿತರಣಾ ಕಚೇರಿಗಳಲ್ಲಿ ಮಾತ್ರ ಲಭ್ಯವಿದೆ.