
ಚಿಕ್ಕಮಗಳೂರು: ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಗರ್ಭಿಣಿ ಕೊಪ್ಪ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯ ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಮರಸಣಿಗೆ ಗ್ರಾಮದ ಕಾಫಿ ಎಸ್ಟೇಟ್ ನಲ್ಲಿ ಕೆಲಸಕ್ಕೆ ಬಂದಿರುವ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮುಮ್ತಾಜ್ ಬೇಗಂ ಅವರಿಗೆ ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ನಲ್ಲಿ ಕರೆತರಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸರಲು ವೈದ್ಯರು ಇರಲಿಲ್ಲ. ಖಾಸಗಿ ಆಸ್ಪತ್ರೆಗೆ ಸೇರಲು ಹಣವಿಲ್ಲದೆ 70 ಕಿಲೋ ಮೀಟರ್ ದೂರದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಹೊರಟಿದ್ದಾರೆ.
ಮಾರ್ಗ ಮಧ್ಯದಲ್ಲಿಯೇ ಹೆರಿಗೆ ನೋವು ಜಾಸ್ತಿಯಾಗಿ ಆಂಬುಲೆನ್ಸ್ ಸಿಬ್ಬಂದಿ ಷಣ್ಮುಖ ಹೆರಿಗೆ ಮಾಡಿಸಿದ್ದಾರೆ. ಮಮ್ತಾಜ್ ಬೇಗಂ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಹೆರಿಗೆ ಮಾಡಿಸಲು ಆಂಬುಲೆನ್ಸ್ ಸಿಬ್ಬಂದಿ ಷಣ್ಮುಖ ಅವರಿಗೆ ಆಂಬುಲೆನ್ಸ್ ಚಾಲಕ ಶಿವಕುಮಾರ್ ಸಹಾಯ ಮಾಡಿದ್ದಾರೆ. ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.