ಗುರುಗ್ರಾಮದ ಸ್ಟಾರ್ಟಪ್ ಒಂದರಲ್ಲಿ ನಡೆದ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯುವ ಉದ್ಯೋಗಿಯೊಬ್ಬರನ್ನು ಕೆಲಸಕ್ಕೆ ಸೇರಿದ 20 ದಿನಗಳಲ್ಲೇ ವಜಾ ಮಾಡಲಾಗಿದ್ದು, ಇದು ಸ್ಟಾರ್ಟಪ್ ಸಂಸ್ಕೃತಿಯಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉದ್ಯೋಗಿಯು ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, “ವರ್ತನೆಯ ಸಮಸ್ಯೆ” ಎಂಬ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆದುಹಾಕಲಾಗಿದೆ.
ಕೆಲಸಕ್ಕೆ ಸೇರಿದ ಮೂರನೇ ದಿನವೇ ಬಾಸ್, “ನಿಮಗೆ ವರ್ತನೆಯ ಸಮಸ್ಯೆ ಇದೆ” ಎಂದು ಹೇಳಿದ್ದಾರೆ. ಇದರ ನಂತರ, ಚಹಾ ವಿರಾಮ, ಸಿಗರೇಟ್ ವಿರಾಮ, ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಹೋಗುವುದು, ಇವೆಲ್ಲವೂ ವಿವಾದಕ್ಕೆ ಕಾರಣವಾಗಿವೆ. ನಿರ್ದೇಶಕರ ಕ್ಯಾಬಿನ್‌ನಲ್ಲಿ ಕೆಲಸ ಮಾಡಲು ಹೇಳಿ, ಅಲ್ಲಿಂದಲೇ ವಜಾ ಮಾಡಿರುವ ಘಟನೆ ನಡೆದಿದೆ.
ವಜಾಗೊಳಿಸಿದ ಒಂದು ವಾರದ ನಂತರ, ಚರ್ಚೆಗೆ ಕರೆದ ನಿರ್ದೇಶಕರು ಮತ್ತು ಮ್ಯಾನೇಜರ್, ಸಂಭಾಷಣೆಯ ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾರೆ. ಆದರೆ, ಉದ್ಯೋಗಿ ರೆಕಾರ್ಡಿಂಗ್ ಮಾಡಲು ಪ್ರಯತ್ನಿಸಿದಾಗ, “ಅತಿಯಾದ ಬುದ್ಧಿವಂತಿಕೆ ಇನ್ನು ಹೋಗಿಲ್ಲವೇ ?” ಎಂದು ಹೇಳಿ ನಿರಾಕರಿಸಿದ್ದಾರೆ.
ಈ ಪೋಸ್ಟ್ ರೆಡ್ಡಿಟ್‌ನಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. “ವಿಷಕಾರಿ ಕೆಲಸದ ವಾತಾವರಣ” ಎಂದು ಹಲವರು ಟೀಕಿಸಿದ್ದಾರೆ. “ಕಂಪನಿಯ ಹೆಸರನ್ನು ಬಹಿರಂಗಪಡಿಸಿ, ಸತ್ಯ ಹೊರಬರಲಿ” ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು, “15 ದಿನಗಳ ಕಾಲ ಇಂತಹ ಕಿರುಕುಳವನ್ನು ಏಕೆ ಸಹಿಸಿಕೊಳ್ಳಬೇಕು?” ಎಂದು ಪ್ರಶ್ನಿಸಿದ್ದಾರೆ.
ಸದ್ಯ, ಉದ್ಯೋಗಿಯು ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದು, ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಕಂಪನಿಯ ಹೆಸರು ಬಹಿರಂಗಪಡಿಸದ ಉದ್ಯೋಗಿ, ಸ್ಟಾರ್ಟಪ್ ಕೋಚಿಂಗ್ ಕೇಂದ್ರಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತಿತ್ತು ಎಂದು ತಿಳಿಸಿದ್ದಾರೆ.