
ಮಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸುತ್ತಿದ್ದು, ಅಲರ್ಟ್ ಘೋಷಿಸಲಾಗಿದೆ.
ಕರ್ವಾವಳಿ ಜಿಲ್ಲೆಯಲ್ಲಿ ನಿನ್ನೆಯಿಂದ ಬಿಸಿ ಗಾಳಿ, ಉಷ್ಣ ಅಲೆ ಬೀಸುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಜನರು ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮುನ್ನೆಚ್ಚರಿಕಾ ಕ್ರಮ:
ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ
ಹೆಚ್ಚು ಹೆಚ್ಚು ನೀರು ಕುಡಿಯಿರಿ
ತಿಳಿಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ
ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕ, ಛತ್ರಿ, ಟೋಪಿ, ಬೂಟುಗಳನ್ನು ಅಥವ ಪಾದರಕ್ಷೆಗಳನ್ನು ಧರಿಸಿ
ಶ್ರಮದಾಯಕ ಚಟುವಟಿಕೆ ತಪ್ಪಿಸಿ
ಮೂರ್ಛೆ ಅರ್ಥವಾ ಅನಾರೋಗ್ಯ, ಸುಸ್ತು ಎಂದೆನೆಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಒಆರ್ ಎಸ್, ಲಸ್ಸಿ, ಮಜ್ಜಿಗೆಯನ್ನು ಸೇವಿಸಿ. ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ಹಾಗೂ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಿ
ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಹಾಗೂ ಅವುಗಳಿಗೆ ಸಾಕಷ್ಟು ನೀರಿನ ವ್ಯವಸ್ಥೆ ಮಾಡಿ
ನಿಮ್ಮ ಮನೆಗಳನ್ನು ತಂಪಾಗಿರಿಸಿ. ವಾಸವಿರುವ ಕೋಣೆಗಳನ್ನು ತಂಪಾಗಿರಿಸಿ. ಮನೆಗಳಿಗೆ ಪರದೆಗಳು ಅಥವಾ ಸನ್ ಶೇಡ್ ಗಳನ್ನು ಬಳಸಿ ರಾತ್ರಿ ವೇಳೆ ಕಿಟಕಿ ತೆಗೆಯಿರಿ ಎಂದು ಸೂಚಿಸಿದೆ.
ಇನ್ನು ಉತ್ತರ ಕನ್ನಡ ಜಿಲ್ಲಾಡಳಿತ ಕೂಡ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮುಂದಿನ ಎರಡು ದಿನಗಳ ಕಾಲ ಬಿಸಿ ಗಾಳಿ ಬೀಸಲಿದ್ದು, ನಾಗರಿಕರು ಮುನ್ನೆಚ್ಹರಿಕೆ ವಹಿಸುವಂತೆ ಸೂಚಿಸಿದೆ.
ಸಾರ್ವಜನಿಕರಿಗೆ ತೊಂದರೆಗಳಾದಲ್ಲಿ ತುರ್ತು ಸಹಾಯಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 1077 ಅಥವಾ 08382229557ಕ್ಕೆ ಸಂಪರ್ಕಿಸಬಹುದು.