
ಕೊಯಮತ್ತೂರು: ಕ್ಷೇತ್ರ ಮರು ವಿಂಗಡಣೆಯ ವೇಳೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೊಯಮುತ್ತೂರಿನಲ್ಲಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದರೆ ಎಂಟು ಕ್ಷೇತ್ರಗಳು ನಷ್ಟವಾಗುವುದಿಲ್ಲ. ತಮಿಳುನಾಡು ಎಂಟು ಕ್ಷೇತ್ರಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿರುವುದು ಸುಳ್ಳು ಎಂದು ಹೇಳಿದ್ದಾರೆ.
ಕ್ಷೆತ್ರ ಮರು ವಿಂಗಡಣೆಯ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸುಳ್ಳು ಹೇಳುತ್ತಿದ್ದಾರೆ. ಸ್ಟಾಲಿನ್ ಹೇಳಿಕೆಯಿಂದ ತಮಿಳುನಾಡು ಜನ ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಅವರ ಪುತ್ರ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿಕೆಗೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಕ್ಷೇತ್ರ ಮರುವಿಂಗಡಣೆಯಿಂದ ನ್ಯಾಯಯುತ ಪಾಲು ಸಿಗುತ್ತದೆ. ದಕ್ಷಿಣ ಭಾರತದಲ್ಲಿ ಒಂದೇ ಒಂದು ಕ್ಷೇತ್ರವನ್ನು ಕಳೆದುಕೊಳ್ಳುವುದಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಕ್ಷೇತ್ರ ನಷ್ಟವಾಗದಂತೆ ಪ್ರಧಾನಿ ಮೋದಿ ನೋಡಿಕೊಳ್ಳುತ್ತಾರೆ. ಕ್ಷೇತ್ರ ಮರು ವಿಂಗಡಣೆ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಅಮಿತ್ ಶಾ ಹೇಳಿದ್ದಾರೆ.