
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನು ಮುಂದೆ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದಲೇ ಭರಿಸಲಾಗುವುದು.
ಇದುವರೆಗೆ ಆಯಾ ದೇವಸ್ಥಾನಗಳ ಆದಾಯದಿಂದ ವೇತನ ನೀಡಲಾಗುತ್ತಿತ್ತು. ಇನ್ನು ಸರ್ಕಾರವೇ ವೇತನ ನೀಡಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಎ ದರ್ಜೆ ಹಿರಿಯ ಶ್ರೇಣಿಯ 10, ಕಿರಿಯ ಶ್ರೇಣಿಯ 12, ಗ್ರೂಪ್ ಬಿ 23, ಅಧೀಕ್ಷಕರು 39, ಪ್ರಥಮ ದರ್ಜೆ ಸಹಾಯಕರು 23, ದ್ವಿತೀಯ ದರ್ಜೆ ಸಹಾಯಕರು 19 ಹಾಗೂ ಗ್ರೂಪ್ ಡಿ ನ 5 ಮಂದಿ ನೌಕರರಿಗೆ ಸಂಚಿತ ನಿಧಿಯಿಂದ ವೇತನ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ.
ಒಟ್ಟು 131 ನೌಕರರ ತಿಂಗಳ ವೇತನ ಸುಮಾರು ಒಂದು ಕೋಟಿಯಂತೆ ವರ್ಷಕ್ಕೆ 12.16 ಕೋಟಿ ರೂ.ಗಳನ್ನು ಆಯಾ ದೇವಸ್ಥಾನದವರು ಭರಿಸುತ್ತಿದ್ದರು. ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ವೇತನ ನೀಡುವುದರಿಂದ ಈ ದೇವಸ್ಥಾನಗಳಿಗೆ ಈ ಮೊತ್ತ ಉಳಿತಾಯವಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.