ವಿಜಯಪುರ: ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಿಸಲಾದ ಕಿಮೋಥೆರಪಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಕಿಮೋಥೆರಪಿ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಡೇ ಕೇರ್ ಕಿಮೋಥೆಪಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಕಿಮೋಥೆರಪಿಗಾಗಿ ದೂರದ ಊರುಗಳಿಗೆ ಹೋಗುವುದು ತಪ್ಪಲಿದೆ. ಕ್ಯಾನ್ಸರ್ ರೋಗಿಗಳು ಸ್ಥಳೀಯವಾಗಿ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಯಾವುದೇ ರೋಗವನ್ನು ಗುಣಪಡಿಸಲು ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿದಲ್ಲಿ ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಹೆಚ್ಚಲು ಅವಶ್ಯಕತೆ ಇರುವ ಯಂತ್ರೋಪಕರಣಗಳನ್ನು ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ ಜನ ಕಿಮೋಥೆರಪಿ ಮತ್ತು ಮೆಮೊಗ್ರಾಫಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಜವಳಿ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಇದ್ದರು.