ಬಾಲಿವುಡ್ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಅವರು ಹೋಳಿ ಹಬ್ಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಫರಾ ಖಾನ್ ಅವರು ‘ಸೆಲೆಬ್ರಿಟಿ ಮಾಸ್ಟರ್‌ಶೆಫ್’ ಕಾರ್ಯಕ್ರಮದಲ್ಲಿ ಹೋಳಿ ಹಬ್ಬವನ್ನು “ಚಾಪ್ರಿಗಳ ಹಬ್ಬ” ಎಂದು ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂಸ್ತಾನಿ ಭಾವು ಎಂದು ಜನಪ್ರಿಯವಾಗಿರುವ ವಿಕಾಶ್ ಫಟಕ್ ಅವರು ತಮ್ಮ ವಕೀಲರಾದ ಅಲಿ ಕಾಶಿಫ್ ಖಾನ್ ದೇಶಮುಖ್ ಅವರ ಮೂಲಕ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫರಾ ಖಾನ್ ಅವರ ಈ ಹೇಳಿಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಫರಾ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196, 299, 302 ಮತ್ತು 353 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಫರಾ ಖಾನ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.