ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ 17 ವರ್ಷದ ಬಾಲಕಿಯನ್ನು ಏಳು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಈ ಸಂಬಂಧ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ ಆರೋಪಿಗಳಲ್ಲಿ ಒಬ್ಬ, ಆಕೆಯನ್ನು ತನ್ನ ಬಾಡಿಗೆ ಮನೆಗೆ ಕರೆದಿದ್ದಾನೆ. ಅಲ್ಲಿ ಆತ ಮತ್ತು ಆತನ ಆರು ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬಾಲಕಿಯ ಅಜ್ಜಿ ಉಕ್ಕಡಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿ ವರದಿ ದಾಖಲಿಸಿದ ನಂತರ ಪೊಲೀಸರು ತನಿಖೆ ಪ್ರಾರಂಭಿಸಿದರು. ಸೋಮವಾರ ಬೆಳಿಗ್ಗೆ ಬಾಲಕಿ ಹಿಂತಿರುಗಿದ್ದಳು. ಪೊಲೀಸರು ವಿಚಾರಿಸಿದಾಗ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ.
ಬಾಲಕಿ ನೀಡಿದ ದೂರಿನ ಆಧಾರದ ಮೇಲೆ, ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಂಗಳವಾರ, ಏಳು ವಿದ್ಯಾರ್ಥಿಗಳನ್ನು ಕುಣಿಯಮುತ್ತೂರಿನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಆರೋಪಿಗಳು 19 ಮತ್ತು 20 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.