
ಕೊಪ್ಪಳ: ಅಂಗನವಾಡಿ ಕೇಂದ್ರದಲ್ಲಿ ಮಗು ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಸೋಮವಾರ ನಡೆದಿದೆ.
ಅಲಿಯಾ ಅಹಮದ್ ರಿಯಾಜ್(5) ಮೃತಪಟ್ಟ ಮಗು. ಮಧ್ಯಾಹ್ನ ಅಂಗನವಾಡಿಯಲ್ಲಿ ಆಟವಾಡುವಾಗ ಅಲಿಯಾ ಏಕಾಏಕಿ ಕುಸಿದು ಬಿದ್ದು ಮೂರ್ಚೆ ತಪ್ಪಿದೆ. ಕೂಡಲೇ ಕುಟುಂಬದವರು ಮಗುವನ್ನು ದೋಟಿಹಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕುಷ್ಟಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಕುಷ್ಟಗಿ ಆಸ್ಪತ್ರೆಗೆ ಕರೆದೊಯ್ದಾಗ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ಕುರಿತಾದ ಮಾಹಿತಿ ತಿಳಿಯಲಿದೆ ಎಂದು ವೈದ್ಯರಾದ ಡಾ. ಕೆ.ಎಸ್. ರೆಡ್ಡಿ, ಮಹಾಂತೇಶ ಹೇಳಿದ್ದಾರೆ.