ನವದೆಹಲಿ : ಗೃಹ ಸಾಲ ಪಡೆಯಲು ಅಥವಾ ಮನೆಗಳನ್ನು ಖರೀದಿಸಲು ಯೋಜಿಸುತ್ತಿರುವ ಜನರಿಗೆ ಭಾರಿ ಪರಿಹಾರವಾಗಿ, ದೇಶದ ಹಲವಾರು ಬ್ಯಾಂಕುಗಳು ತಮ್ಮ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿವೆ.
ಹೌದು, ಫೆಬ್ರವರಿ 7, 2025 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಕಡಿಮೆ ಮಾಡಿದ್ದು, ನಂತರ ಬ್ಯಾಂಕುಗಳು ಬಡ್ಡಿದರಗಳನ್ನು ಕಡಿಮೆ ಮಾಡಿದೆ.
ಕೇಂದ್ರೀಯ ಬ್ಯಾಂಕಿಂಗ್ ಪ್ರಾಧಿಕಾರವು ತನ್ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿತು. ಈಗ ಅದು ಶೇ.6.25ಕ್ಕೆ ಇಳಿದಿದೆ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಐದು ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿವೆ.
ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್ಎಲ್ಎಲ್ಆರ್) ಎಂದರೆ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಸಾಲ ನೀಡುವ ದರ. ಈ ದರವು ರಿಸರ್ವ್ ಬ್ಯಾಂಕಿನ ರೆಪೊ ದರಕ್ಕೆ ನೇರವಾಗಿ ಸಂಬಂಧಿಸಿದೆ. ಆರ್ಎಲ್ಎಲ್ಆರ್ ಗ್ರಾಹಕರಿಗೆ ತಮ್ಮ ಇಎಂಐ ಅನ್ನು ಕಡಿಮೆ ಮಾಡಲು ಅಥವಾ ಸಾಲದ ಅವಧಿಯನ್ನು ಕಡಿಮೆ ಮಾಡಲು ಆಯ್ಕೆಯನ್ನು ನೀಡುತ್ತದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ರೆಪೊ ದರವನ್ನು ಕಡಿಮೆ ಮಾಡಿದ ನಂತರ, ಐದು ಪ್ರಮುಖ ಬ್ಯಾಂಕುಗಳು ತಮ್ಮ ರೆಪೊ ದರಕ್ಕೆ ಸಂಬಂಧಿಸಿದ ಬಡ್ಡಿದರಗಳನ್ನು ಅಂದರೆ ಆರ್ಎಲ್ಎಲ್ಆರ್ ಅನ್ನು ಕಡಿಮೆ ಮಾಡಿವೆ.
* ಕೆನರಾ ಬ್ಯಾಂಕ್ ತನ್ನ ಆರ್ಎಲ್ಎಲ್ಆರ್ ಅನ್ನು ಶೇಕಡಾ 9.25 ರಿಂದ ಶೇಕಡಾ 9.00 ಕ್ಕೆ ಇಳಿಸಿದೆ. ಹೊಸ ದರವು ಫೆಬ್ರವರಿ 12, 2025 ರಿಂದ ಜಾರಿಗೆ ಬರಲಿದೆ ಎಂದು ಸಾರ್ವಜನಿಕ ವಲಯದ ಬ್ಯಾಂಕ್ ಹೇಳಿದೆ.ಹೊಸ ದರಗಳು ಫೆಬ್ರವರಿ 12, 2025 ರಂದು ಅಥವಾ ನಂತರ ತೆರೆಯಲಾದ ಖಾತೆಗಳಿಗೆ ಮಾತ್ರ ಅನ್ವಯವಾಗುತ್ತವೆ.
* ಬ್ಯಾಂಕ್ ಆಫ್ ಬರೋಡಾ ತನ್ನ ಆರ್ಎಲ್ಎಲ್ಆರ್ ಅನ್ನು ಶೇಕಡಾ 9.25 ರಿಂದ ಶೇಕಡಾ 9.10 ಕ್ಕೆ ಇಳಿಸಿದೆ. ಈ ದರವು ಫೆಬ್ರವರಿ 7, 2025 ರಿಂದ ಜಾರಿಗೆ ಬರಲಿದೆ.
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2025 ರ ಫೆಬ್ರವರಿ 11 ರಿಂದ ಜಾರಿಗೆ ಬರುವಂತೆ ತನ್ನ ಆರ್ಎಲ್ಎಲ್ಆರ್ ಅನ್ನು ಶೇಕಡಾ 9.25 ರಿಂದ 9.00 ಕ್ಕೆ ಇಳಿಸುವುದಾಗಿ ಘೋಷಿಸಿದೆ.
* ಇಂಡಿಯನ್ ಓವರ್ಸೀಸ್ ಬ್ಯಾಂಕ್ ತನ್ನ ಆರ್ಎಲ್ಎಲ್ಆರ್ನಲ್ಲಿ 25 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಿದೆ, ನಂತರ ಬಡ್ಡಿದರವನ್ನು ಶೇಕಡಾ 9.35 ರಿಂದ ಶೇಕಡಾ 9.10 ಕ್ಕೆ ಇಳಿಸಿದೆ.
* ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತನ್ನ ಆರ್ಎಲ್ಎಲ್ಆರ್ ಅನ್ನು ಶೇಕಡಾ 9.25 ರಿಂದ ಶೇಕಡಾ 9.00 ಕ್ಕೆ ಇಳಿಸಿದೆ. ಈ ಹೊಸ ದರವು 10 ಫೆಬ್ರವರಿ 2025 ರಿಂದ ಜಾರಿಗೆ ಬರಲಿದೆ.