alex Certify ನೃತ್ಯದ ವಿಚಾರಕ್ಕೆ ದಂಪತಿ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯದ ವಿಚಾರಕ್ಕೆ ದಂಪತಿ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿ

ರಾಜಸ್ಥಾನದ ಧೌಲ್‌ಪುರ ಜಿಲ್ಲೆಯಲ್ಲಿ ಮದುವೆಯ ಸಮಾರಂಭದ ವೇಳೆ ನಡೆದ ಭೀಕರ ಘಟನೆಯಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನೃತ್ಯದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯ ಕಂಡಿದೆ.

ಧೌಲ್‌ಪುರ ಜಿಲ್ಲೆಯ ಸಾದರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಜ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರೌಲಿ ಜಿಲ್ಲೆಯ ನಿವಾಸಿ ಮಹಾವೀರ್‌ಗೆ ಮೂರು ವರ್ಷಗಳ ಹಿಂದೆ ಧೌಲ್‌ಪುರದ ಕರ್ಕಾ ಖೇರ್ಲಿ ಗ್ರಾಮದ ಬಬಿತಾ ಜೊತೆ ವಿವಾಹವಾಗಿತ್ತು.

ಸೋಮವಾರ ಅವರು ಸಂಬಂಧಿಕರೊಬ್ಬರ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದು, ರಾತ್ರಿ ಕಾರ್ಯಕ್ರಮದ ವೇಳೆ ಇಬ್ಬರ ನಡುವೆ ನೃತ್ಯದ ಬಗ್ಗೆ ವಾಗ್ವಾದ ಉಂಟಾಗಿತ್ತು. ಈ ವಾಗ್ವಾದವು ತಾರಕಕ್ಕೇರಿದ್ದು, ರಾತ್ರಿ ಕುಟುಂಬದ ಇತರರು ಮಲಗಿದ ನಂತರ, ಮಹಾವೀರ್, ಬಬಿತಾಳ ತಲೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಪರಾರಿಯಾಗಿದ್ದಾನೆ.

ಮಂಗಳವಾರ ಬೆಳಿಗ್ಗೆ ಕುಟುಂಬದವರು ಎಚ್ಚರವಾದಾಗ ಬಬಿತಾಳ ಮೃತದೇಹ ಕೊಠಡಿಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಮಾಹಿತಿ ತಿಳಿದು ಸಾದರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಪಡಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮೃತಳ ತಂದೆ ವಾಸುದೇವ್ ತನ್ನ ಅಳಿಯ ಮಹಾವೀರ್ ವಿರುದ್ಧ ಕೊಲೆ ಮತ್ತು ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದಾರೆ. ಒಂದು ತಿಂಗಳ ಹಿಂದೆ ಕೂಡ ಇಬ್ಬರ ನಡುವೆ ಜಗಳವಾಗಿತ್ತು, ನಂತರ ಮಹಾವೀರ್ ಫರಿದಾಬಾದ್‌ಗೆ ಕೆಲಸ ಮಾಡಲು ಹೋಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಾದರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಭೀಮ್ ಸಿಂಗ್ ಮಾತನಾಡಿ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಘಟನೆಯ ಸಂಪೂರ್ಣ ಸತ್ಯಾಂಶವನ್ನು ಹೊರತೆಗೆಯಲು ಮದುವೆ ಸಮಾರಂಭದಲ್ಲಿ ಹಾಜರಿದ್ದವರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...