ತಾಂತ್ರಿಕ ದೈತ್ಯ ಇನ್ಫೋಸಿಸ್ ತನ್ನ ಮೈಸೂರು ತರಬೇತಿ ಕೇಂದ್ರದಿಂದ ಅಂದಾಜು 400 ತರಬೇತಿ ಉದ್ಯೋಗಿಗಳನ್ನು ಫೆಬ್ರವರಿ 7 ರಂದು ವಜಾಗೊಳಿಸಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ವಜಾಗಳು ಸಂಭವಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿದೆ.
ಉದ್ಯೋಗಿಗಳು ತಮ್ಮ ಬಿಡುಗಡೆ ಒಪ್ಪಂದಗಳಿಗೆ ಸ್ವಯಂಪ್ರೇರಿತವಾಗಿ ಸಹಿ ಮಾಡಿದ್ದಾರೆ ಎಂದು ಇನ್ಫೋಸಿಸ್ ಹೇಳಿಕೊಂಡರೆ, ಬಾಧಿತರು ಈ ಪ್ರಕ್ರಿಯೆಯನ್ನು ಬಲವಂತದ ಮತ್ತು ಬೆದರಿಸುವಂತಹುದು ಎಂದು ವಿವರಿಸಿದ್ದಾರೆ.
ಮಾಧ್ಯಮವೊಂದು ವಜಾಗೊಂಡ ಇನ್ಫೋಸಿಸ್ ತರಬೇತಿ ಪಡೆದ ಕೆಲವರೊಂದಿಗೆ ಮಾತನಾಡಿದ್ದು, ಫೆಬ್ರವರಿ 6 ರಂದು ವಿಫಲವಾದ ತರಬೇತಿ ಮೌಲ್ಯಮಾಪನ ಫಲಿತಾಂಶಗಳ ಕುರಿತು ಸಭೆಗೆ ತಮ್ಮನ್ನು ಕರೆಯಲಾಯಿತು ಎಂದು ಅವರು ಖಚಿತಪಡಿಸಿದ್ದಾರೆ.
ಅವರಲ್ಲಿ 400 ಜನರನ್ನು ಮರುದಿನ ವಜಾ ಮಾಡಲಾಗಿದ್ದು, ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಈ ವಿಷಯವನ್ನು ಇತರರೊಂದಿಗೆ ಚರ್ಚಿಸದಂತೆ ಇಮೇಲ್ ಮೂಲಕ ಸೂಚಿಸಲಾಯಿತು. ಅವರಲ್ಲಿ ಕೆಲವರು ಸುಮಾರು ಎರಡು ವರ್ಷಗಳ ಕಾಲ ಆನ್ಬೋರ್ಡ್ ಆಗಲು ಕಾಯುತ್ತಿದ್ದರು ಎನ್ನಲಾಗಿದೆ.
ಇನ್ಫೋಸಿಸ್ ಕ್ಯಾಂಪಸ್ಗೆ ‘ಗೌಪ್ಯ’ ಸಭೆಗೆ ಪ್ರವೇಶಿಸುವಾಗ, ಸಮವಸ್ತ್ರ ಧರಿಸಿದ್ದ ಭದ್ರತಾ ಸಿಬ್ಬಂದಿ ತಮ್ಮ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಬ್ಯಾಗ್ಗಳನ್ನು ವಶಪಡಿಸಿಕೊಂಡರು ಎಂದು ತರಬೇತಿ ಪಡೆಯುವವರು ಹೇಳಿಕೊಂಡಿದ್ದಾರೆ. ನಂತರ ಅವರನ್ನು HR ಸಿಬ್ಬಂದಿ ಕ್ಯಾಬಿನ್ಗೆ ಕರೆದೊಯ್ದಿದ್ದು, ಅಲ್ಲಿ ಅವರು “ಪರಸ್ಪರ ಬೇರ್ಪಡುವಿಕೆ ಒಪ್ಪಂದಕ್ಕೆ” ಸಹಿ ಮಾಡಲು ಒತ್ತಡ ಹೇರಿದರು ಎಂದು ಆರೋಪಿಸಲಾಗಿದೆ.
“ನಾನು ಇಷ್ಟವಿಲ್ಲದೆ ಸಹಿ ಮಾಡಿದೆ. ಇದು ನನ್ನ ಕನಸಿನ ಕೆಲಸವಾಗಿತ್ತು, ಆದರೆ ಅವರು ನನ್ನನ್ನು ಬಲವಂತವಾಗಿ ಹೊರಹಾಕಿದರು” ಎಂದು ಅವರಲ್ಲಿ ಒಬ್ಬರು ಹೇಳಿಕೊಂಡರೆ ಇನ್ಫೋಸಿಸ್ ಕೇವಲ 25,000 ರೂಪಾಯಿ ಪರಿಹಾರವನ್ನು ನೀಡಿತು. ಉದ್ಯೋಗಿಗಳನ್ನು ತಕ್ಷಣವೇ ಕ್ಯಾಂಪಸ್ನಿಂದ ಹೊರಗೆ ಕಳುಹಿಸಲಾಯಿತು. “ಇದು ಅವಮಾನಕರ ಮತ್ತು ಆಘಾತಕಾರಿ ಅನುಭವವಾಗಿತ್ತು. ಅವರು ಯಾವುದೇ ಪರಿಗಣನೆ ತೋರಿಸಲಿಲ್ಲ ಮತ್ತು ತಕ್ಷಣವೇ ನಮ್ಮನ್ನು ಬಿಟ್ಟು ಹೋಗುವಂತೆ ಆದೇಶಿಸಿದರು. ನಮ್ಮನ್ನು ಬೀದಿಗೆ ತಳ್ಳಲಾಯಿತು” ಎಂದು ವಜಾಗೊಂಡ ಮತ್ತೊಬ್ಬರು ಹೇಳಿಕೊಂಡಿದ್ದಾರೆ.
ತರಬೇತಿ ಪಡೆದ ಆನೇಕರು, ಮೌಲ್ಯಮಾಪನ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಉದ್ಯೋಗಿಗಳನ್ನು ವಿಫಲಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.