ಬೆಂಗಳೂರು: ಬಿಜೆಪಿಯಲ್ಲಿನ ಆಂತರಿಕ ಕಲಹ ದುರದೃಷ್ಟಕರ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆಯಿಟ್ಟಿಲ್ಲ. ನಾನು ಯಾವುದೇ ಗುಂಪಿನ ಸಭೆ ಕರೆಯುವ ಪ್ರಶ್ನೆಯೂ ಇಲ್ಲ ಎಂದು ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ. ಎರಡೂ ಕಡೆ ತಾಳ್ಮೆ ಕಳೆದುಕೊಳ್ಳದೇ ರಾಜ್ಯ ಬಿಜೆಪಿಯ ಸರ್ವೋಚ್ಛನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಎಲ್ಲವೂ ಬಗೆಹರಿಯಬೇಕು. ಇಲ್ಲವೇ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.
ಹೈಕಮಾಂಡ್ ನಾಯಕರು ಕರ್ನಾಟಕದ ಪಕ್ಷದ ಬೆಳವಣಿಗೆಗಳ ಬಗ್ಗೆ ತಕ್ಷಣ ಗಮನಹರಿಸುವ ಅಗತ್ಯವಿದೆ. ಎಲ್ಲ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯವನ್ನು ವರಿಷ್ಠರು ಕೈಗೊಳ್ಳುತ್ತಾರೆ ಎಂದು ಹೇಳಿದರು.