ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ತಾರಕಕ್ಕೇರಿದ್ದು, ಹೈಕಮಾಂಡ್ ಅಂಗಳ ತಲುಪಿದೆ. ಪಕ್ಷದಲ್ಲಿನ ಈ ಬೆಳವಣಿಗೆ ನಮಗೂ ಬೇಸರ ತಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಪಕ್ಷದಲ್ಲಿನ ವಿದ್ಯಮಾನಗಳು ನಮಗೂ ಬೇಸರತಂದಿದೆ. ನಾನೂ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.
ಈ ಹಿಂದೆ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಿದ್ದಾಗ ಅವರನ್ನು ಭೇಟಿಯಾಗಿ ರಾಜ್ಯ ಬಿಜೆಪಿಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದ್ದೆ. ಈಗಾಗಲೇ ಯತ್ನಾಳ್ ಟೀಂ ಹೈಕಮಾಂಡ್ ಭೇಟಿಯಾಗಿ ಎಲ್ಲಾ ವಿಚಾರಗಳನ್ನು ಗಮನಕ್ಕೆ ತಂದಿದೆ. ಬೊಮ್ಮಾಯಿ ಅವರು ದೆಹಲಿಯಲ್ಲಿಯೇ ಇದ್ದಾರೆ. ಅವರು ತಿಳಿಸಿದಾಗ ನಾನೂ ದೆಹಲಿಗೆ ಹೋಗುತ್ತೇನೆ. ಒಟ್ಟಿನಲ್ಲಿ ಪಕ್ಷದಲ್ಲಿನ ಈ ಬೆಳವಣಿಗೆ ಸರಿ ಹೋಗಬೇಕು ಎಂದರು.
ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ವರಿಷ್ಠರು ಎಲ್ಲ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಒಂದಿಷ್ಟು ಜನ ರಾಜ್ಯಾಧ್ಯಕ್ಷರ ಪರವಾಗಿ ಅಭಿಪ್ರಾಯ ಕೊಟ್ಟಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೆ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು.