ಬೆಂಗಳೂರು: ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮತ್ತಷ್ಟು ನಾಗರಿಕ ಸೇವೆಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ. ಆದಾಯ, ಜಾತಿ, ವಾಸ ಸ್ಥಳ ಪ್ರಮಾಣ ಪತ್ರ ಸೇರಿದಂತೆ 44 ಸೇವೆಗಳು ಲಭ್ಯವಾಗಲಿವೆ.
ಅಟಲ್ ಜೀ ಸೇವಾ ಕೇಂದ್ರ ನಾಡಕಚೇರಿಗಳಲ್ಲಿ ದೊರೆಯುತ್ತಿದ್ದ ಈ ಸೇವೆಗಳನ್ನು ಇನ್ನು ಮುಂದೆ ಎಲ್ಲಾ ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಈಗಾಗಲೇ 1239 ಗ್ರಾಮಗಳಲ್ಲಿ ಈ ಸೇವೆಗಳನ್ನು ಕಲ್ಪಿಸಲಾಗಿದ್ದು, ಉಳಿದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಸೇವೆ ಒದಗಿಸಲು ಸೂಚಿಸಲಾಗಿದೆ.
ಇದಕ್ಕೆ ಪೂರಕವಾಗಿ ಪಂಚತಂತ್ರ 2.9 ತಂತ್ರಾಂಶವನ್ನು ನಾಡಕಚೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಇದರಿಂದಾಗಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸೇವೆಗಳಿಗೆ ಅರ್ಜಿ ಸಲ್ಲಿಸಿ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.