ಬೆಂಗಳೂರು: ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಅನುಮತಿ ನೀಡಿದ್ದು, ಕ್ವಿಂಟಾಲ್ ಗೆ 5650 ರೂ. ದರದಲ್ಲಿ ಖರೀದಿ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ನೋಂದಣಿಗೆ 80 ದಿನ, ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರವು ನಾಫೆಡ್ NCCF ಸಂಸ್ಥೆಗಳನ್ನು ಹಾಗೂ ರಾಜ್ಯ ಸರ್ಕಾರವು ರಾಜ್ಯ ಸಹಕಾರ ಮಾರಾಟ ಮಂಡಲ, ಕಲಬುರಗಿಯಯಲ್ಲಿನ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಿದ್ದು, ಕಡಲೆಕಾಳು ಖರೀದಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ.
ಸಮೀಪದ TAPCMS, FPO, PACS ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.