ಬೆಂಗಳೂರು: ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ, ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ..
ಕನ್ನಡದ ಕೆಲಸಕ್ಕೆ ನಮ್ಮ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೆ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟಿ. ಅವರಿಗೆ ಸಾಟಿ ಆಗುವವರು ಯಾರೂ ಇನ್ನೂ ಬಂದಿಲ್ಲ. ಡಾ.ರಾಜ್ ಅವರ ಗೋಕಾಕ್ ಚಳವಳಿಯಲ್ಲಿ ನಾನೂ ಅವರ ಭಾಷಣ ಕೇಳಲು ಹೋಗಿದ್ದೆ. ರಾಜ್ ಅವರಿಂದಾಗಿ ಕನ್ನಡ ಹೆಚ್ಚು ಶಕ್ತಿಯುತವಾಗಿ ಬೆಳೆಯಿತು ಎಂದು ಹೇಳಿದ್ದಾರೆ.
ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್ ಅವರ ಪರಿಚಯ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನ ಇತ್ತು. ನನಗೆ ಕನ್ನಡ ನಾಡು, ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ. ಇದನ್ನು ಗ್ರಹಿಸಿಯೇ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನ್ನನ್ನೇ ಕನ್ನಡ ಕಾವಲು ಸಮಿತಿಗೆ ಅಧ್ಯಕ್ಷನನ್ನಾಗಿಸಿದರು. ಗೋವಿಂದು ಅವರ ಬದುಕು ಅವರ ಹೋರಾಟಗಳ ಕಾರಣದಿಂದಾಗಿ ಸಾರ್ಥಕವಾಗಿದೆ. ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಕ್ಕೂ ಇವತ್ತಿಗೂ ಕನ್ನಡದಲ್ಲೇ ಸಹಿ ಹಾಕುತ್ತೇನೆ ಎಂದು ತಿಳಿಸಿದ್ದಾರೆ.
ಬೇರೆ ಧರ್ಮ ಮತ್ತು ಇತರೆ ಭಾಷೆಗಳ ಬಗ್ಗೆ ಸಹಿಷ್ಣುತೆ ಇರಬೇಕು. ನಮ್ಮ ಭಾಷೆ ಬಗ್ಗೆ ಅಭಿಮಾನ ಹೆಚ್ಚಾಗಿರಬೇಕು. ತಾಯಿ ಭಾಷೆ, ತಾಯಿ ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾ.ರಾ.ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಕನ್ನಡ ಪರವಾದ ಹೋರಾಟಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಇವರ ಹೋರಾಟದ ಫಲವಾಗಿ ಕನ್ನಡ ಚಿತ್ರರಂಗದ ಅಡಿಪಾಯ ಗಟ್ಟಿ ಆಯಿತು ಎಂದು ಹೇಳಿದ್ದಾರೆ.