ಮಂಗಳೂರು: ಮಸಾಜ್ ಸೆಂಟರ್ ಮೇಲೆ ಏಕಾಏಕಿ ದಾಳಿ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಪೀಠೋಕರಣಗಳನ್ನು ಧ್ವಂಸ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಮಂಗಳೂರಿನ ಬಿಜೈ ಕೆ ಎಸ್ ಆರ್ ಟಿಸಿ ನಿಲ್ದಾಣ ಬಳಿಯ ಕಲರ್ಸ್ ಮಸಾಜ್ ಸೆಂಟರ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಮಸಾಜ್ ಸೆಂಟರ್ ನ ಕಿಡಕಿ ಗಾಜುಗಳನ್ನು ಪುಡಿಗೈದು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಮಸಾಜ್ ಸೆಂಟರ್ ನಲ್ಲಿದ್ದ ಇಬ್ಬರು ಯುವತಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಸಾಜ್ ಸೆಂಟರ್ ನಲ್ಲಿದ್ದ ವಸ್ತುಗಳನ್ನು ಎಸೆದು ಚಲ್ಲಾಪಿಲ್ಲಿಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀರಾಮ ಸೇನೆ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.