ಬೆಂಗಳೂರು: ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಲೋಪ ದೋಷ ಉಂಟಾದ ಹಿನ್ನೆಲೆಯಲ್ಲಿ ಮತ್ತೆ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ.
ಡಿಸೆಂಬರ್ 29ರಂದು ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳಿದ್ದವು. ಹೀಗಾಗಿ ಮರು ಪರೀಕ್ಷೆ ನಡೆಸಬೇಕು ಅಥವಾ ಪೂರ್ವಭಾವಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಪದೇ ಪದೇ ತಪ್ಪು ಮಾಡುತ್ತಿರುವ ಕರ್ನಾಟಕ ಲೋಕಸೇವಾ ಆಯೋಗ(KPSC) ಪರೀಕ್ಷಾ ನಿಯಂತ್ರಕ ಮತ್ತು ಸಂಬಂಧಿಸಿದ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಭವಿಷ್ಯದಲ್ಲಿ ನಡೆಸುವ ಪರೀಕ್ಷೆಗಳಲ್ಲಿ ಒಂದು ವರ್ಷದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಬೇಕು. ಲೋಕಸೇವಾ ಆಯೋಗವು ನಡೆಸುವ ವಸ್ತುನಿಷ್ಠ ಮಾದರಿಯ ಪರೀಕ್ಷೆಗಳಲ್ಲಿ ಐದನೇ ಆಯ್ಕೆಯಾಗಿ ಯಾವುದೇ ಆಯ್ಕೆಗೆ ಉತ್ತರಿಸಿಲ್ಲ ಎಂದು ಒಎಂಆರ್ ಪ್ರತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.