ಬೆಂಗಳೂರು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಅಧಿಸೂಚನೆಯನ್ನು ರಾಜ್ಯ ಪತ್ರದಲ್ಲಿ ಮಂಗಳವಾರ ಪ್ರಕಟಿಸಲಾಗಿದೆ.
ಜನವರಿ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ಧಾರವಾಡ ಮಹಾನಗರ ಪಾಲಿಕೆ ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆಯ ವ್ಯಾಪ್ತಿ, ಗಡಿ ಪರಿಮಿತಿ ನಿಗದಿಪಡಿಸಲಾಗಿದೆ.
ಅಧಿಸೂಚನೆ ಬಗ್ಗೆ ಯಾವುದೇ ಆಕ್ಷೇಪಣೆ, ಸಲಹೆಗಳಿದ್ದಲ್ಲಿ 30 ದಿನದಲ್ಲಿ ಸಲ್ಲಿಸಬಹುದಾಗಿದೆ. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿವಿ ಗೋಪುರ, ಬೆಂಗಳೂರು ವಿಳಾಸಕ್ಕೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು. ಈ ಮೂಲಕ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ದಶಕಗಳಿಂದ ಇದ್ದ ಬೇಡಿಕೆ ಈಡೇರಿದಂತಾಗಿದೆ.