ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಜಗಳ, ಭಿನ್ನಮತ, ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಬೇಕೆಂಬ ಒತ್ತಡದ ನಡುವೆ ಇಂದು ಮಹತ್ವದ ಸರಣಿ ಸಭೆ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಸಭೆ ನಡೆಸಲಾಗುವುದು.
ಇದೇ ವೇಳೆ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಬೇಕೆ ಅಥವಾ ಸಹಮತದ ಆಧಾರದಲ್ಲಿ ಸಾಂಕೇತಿಕವಾಗಿ ಚುನಾವಣೆ ಪ್ರಕ್ರಿಯೆ ನಡೆಸಬೇಕೆ ಎನ್ನುವುದರ ಕುರಿತು ಚರ್ಚೆ ನಡೆಯಲಿದೆ.
ಸಂಜೆ 4 ಗಂಟೆಗೆ ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ಮಹತ್ವದ ಸರಣಿ ಸಭೆ ನಡೆಸಲಾಗುವುದು. ನಂತರ ಕೋರ್ ಕಮಿಟಿ ಸಭೆ ನಡೆಸಲಾಗುವುದು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಯತ್ನಾಲ್ ಬಣ ಪಟ್ಟು ಹಿಡಿದಿದೆ. ತಮ್ಮ ಬಣದಿಂದ ಅಭ್ಯರ್ಥಿಯೊಬ್ಬರನ್ನು ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಣಕ್ಕಿಳಿಸಲು ಮುಂದಾಗಿದೆ.
ಇವೆಲ್ಲ ಬೆಳವಣಿಗೆಗಳ ನಡುವೆ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಸಂಸದರು ಹಾಗೂ ಶಾಸಕರೊಂದಿಗೆ ಮೊದಲಿಗೆ ಸಭೆ ನಡೆಸಲಾಗುವುದು. ನಂತರ ಸಂಘಟನಾ ಪರ್ವ, ಜಿಲ್ಲಾ ಅಧ್ಯಕ್ಷರ ಜೊತೆಗೆ ಸಭೆ ನಡೆಸಲಿದ್ದು, ಅದಾದ ಬಳಿಕ ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಅಭಿಪ್ರಾಯ ಪಡೆದುಕೊಂಡು ದೆಹಲಿಗೆ ವಾಪಸ್ಸಾಗಲಿರುವ ರಾಧಾ ಮೋಹನ್ ದಾಸ್ ಅಗರವಾಲ್ ವರಿಷ್ಠರಿಗೆ ವರದಿ ನೀಡಲಿದ್ದು, ಅದರ ಆಧಾರದ ಮೇಲೆ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎನ್ನಲಾಗಿದೆ.