ಚಿಕ್ಕಮಗಳೂರು: ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಪುತ್ರಿಯ ಮದುವೆ ನಿಲ್ಲಬಾರದೆಂಬ ಕಾರಣಕ್ಕೆ ಮನೆಯಲ್ಲಿ ವಿಷಯ ತಿಳಿಸದೇ ಮದುವೆ ನೆರವೇರಿಸಲಾಗಿದೆ. ಆರತಕ್ಷತೆ, ಮದುವೆ ಸೇರಿ ವಿವಾಹದ ಕಾರ್ಯಗಳೆಲ್ಲ ಮುಗಿದ ಬಳಿಕ ಮದುಮಗಳಿಗೆ ಸಾವಿನ ಸುದ್ದಿ ಗೊತ್ತಾಗಿದೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಸಂಬಂಧಿಕರು, ಹಿತೈಷಿಗಳು ಮರುಗಿದ್ದಾರೆ.
ಭಾನುವಾರ ಬೆಳಿಗ್ಗೆ ತರೀಕೆರೆಯ ಲಿಂಗದಳ್ಳಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ತರೀಕೆರೆ ನಗರದ ಚೀಲದ ಪಾಪಣ್ಣನವರ ಮಗ ಚಂದ್ರು ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಅವರ ಪುತ್ರಿ ದೀಕ್ಷಾ ಮದುವೆ ನಿಗದಿಯಾಗಿತ್ತು.
ದೀಕ್ಷಾ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಮಗಳಿಗೆ, ತಾಯಿಗೆ ಮತ್ತು ಇನ್ನೂ ಕೆಲವರಿಗೆ ಚಂದ್ರು ಅವರ ಸಾವಿನ ಸುದ್ದಿಯನ್ನು ತಿಳಿಸದೆ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಮದುವೆ ಮಂಟಪದಲ್ಲಿ ವಿಷಯ ಗೊತ್ತಿದ್ದ ಕೆಲವರು ನೋವಿನಲ್ಲಿಯೂ ಆರತಕ್ಷತೆ ಮತ್ತು ಮುಹೂರ್ತ ನೆರವೇರಿಸಿದ್ದಾರೆ. ಮದುವೆ ಕಾರ್ಯಗಳೆಲ್ಲ ಮುಗಿದ ನಂತರ ಚಂದ್ರು ಸಾವಿನ ಸುದ್ದಿ ಗೊತ್ತಾಗಿ ಮದುವೆ ಸಂಭ್ರಮದಲ್ಲಿದ್ದವರಿಗೆ ಸಿಡಿಲು ಬಡಿದಂತಾಗಿದೆ. ಚಂದ್ರು ಸಾವಿನ ಸುದ್ದಿ ಕೇಳಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.