ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಬಂಧಿಸಲು ಡಾಕಾ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.
ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಆಗಿರುವ ಶಕೀಬ್ ಅವರ ಮೇಲೆ ಎರಡು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪದಚ್ಯುತಿಯ ನಂತರ ಶಕೀಬ್ ಕೂಡ ದೇಶ ತೊರೆದಿದ್ದಾರೆ. ಹಲವು ತಿಂಗಳಿಂದ ಅವರು ಬಾಂಗ್ಲಾದೇಶಕ್ಕೆ ಮರಳಿಲ್ಲ.
ಶಕೀಬ್ ಅವರ ಮೇಲೆ ಅಂತರರಾಷ್ಟ್ರೀಯ ಫೈನಾನ್ಸ್ ಇನ್ವೆಸ್ಟ್ಮೆಂಟ್ ಮತ್ತು ಕಾಮರ್ಸ್ ಬ್ಯಾಂಕ್ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಶಕೀಬ್ ಅವರ ಹೆಸರಿನಲ್ಲಿರುವ ಕೃಷಿ ಉದ್ಯಮವೊಂದರ ಚೆಕ್ ಗಳು ಬೌನ್ಸ್ ಆಗಿದ್ದು, ಅದನ್ನು ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಢಾಕಾ ನ್ಯಾಯಾಲಯ ಶಕೀಬ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.