ಬೆಂಗಳೂರು: ಅಕ್ರಮ ಕಟ್ಟಡಗಳು ಮತ್ತು ನಿರ್ಮಾಣ ಕಾರ್ಯದಲ್ಲಿ ಪಾರದರ್ಶಕತೆ ತರಲು ಹೊಸದಾಗಿ ನಿರ್ಮಿಸುವ ಕಟ್ಟಡಗಳಿಗೆ ಕಟ್ಟಡ ನಕ್ಷೆ ಸೌಲಭ್ಯ ಪಡೆದುಕೊಳ್ಳಲು ಏ. 1ರಿಂದ ಇ- ಖಾತಾ ಕಡ್ಡಾಯ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಕಟ್ಟಡ ನಿರ್ಮಿಸಲು ನಿಯಮಾವಳಿ ಪ್ರಸ್ತುತ ಇದ್ದರೂ ಕೂಡ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಕಟ್ಟಡ ಉಪನಿಧಿ ಮತ್ತು ನಿಯಮಗಳ ಅನುಷ್ಠಾನಕ್ಕೆ ಪಾಲಿಕೆಯ ಅಧಿಕಾರಿ ವರ್ಗ ಸರಿಯಾಗಿ ಹೊಣೆ ನಿಭಾಯಿಸುತ್ತಿಲ್ಲ. ಸಾರ್ವಜನಿಕರು ಕೂಡ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿದ್ದು, ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಯೋಜಿತವಾಗಿ ನಗರ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕ್ರಮಬದ್ಧತೆ ತರಲು ಪಾಲಿಕೆ ಕ್ರಮ ಕೈಗೊಂಡಿದ್ದು, ಹೊಸ ಕಟ್ಟಡ ನಿರ್ಮಿಸುವುದು ನಿರ್ಮಿಸುವವರು ಇ- ಖಾತಾ ಪಡೆದುಕೊಂಡೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕಿದೆ.
ಕಳೆದ ಸೆಪ್ಟೆಂಬರ್ ನಿಂದ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ಖರೀದಿ, ಮಾರಾಟಕ್ಕೆ ಇ- ಖಾತಾ ಕಡ್ಡಾಯ ಮಾಡಲಾಗಿದೆ. ಇನ್ನು ಮುಂದೆ ಕಟ್ಟಡ ನಕ್ಷೆ ಮಂಜೂರಾತಿ ಪತ್ರ ಇಲ್ಲದಿದ್ದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುವುದಿಲ್ಲ. ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಇದನ್ನು ಆಧರಿಸಿ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.