ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಕುರ್ಚಿ ಕಾಳಗ ಬಿಟ್ಟು, ಜನರ ಸಂಕಷ್ಟ, ಆಡಳಿತದ ಬಗ್ಗೆ ಗಮನಹರಿಸಬೇಕು. ರಾಜ್ಯದಲ್ಲಿ ಕಾನೂನು ಸುವವಸ್ಥೆ ಎಂಬುದು ಸಂಪೂರ್ಣ ಹದಗೆಟ್ಟು ಹೋಗಿದೆ. ಅತ್ಯಾಚಾರ ಪ್ರಕಣ, ಕೊಲೆ, ಕಳ್ಳತನ, ಬ್ಯಾಂಕ್ ಲೂಟಿಯಂತಹ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಕಾನೂನು ವ್ಯವಸ್ಥೆ ಬಗ್ಗೆ ಯಾರಿಗೂ ಭಯವಿಲ್ಲದಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರ ನಡುವೆ ಒಳಜಗಳ ಹೆಚ್ಚಾಗುತ್ತಿದೆ. ಅವರಿಗೆ ಹೇಳೋರು, ಕೇಳೋರು ಯಾರು ಇಲ್ಲ ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ದಿನಕ್ಕೊಂದು ಬ್ಯಾಂಕ್ ಗಳು ಲೂಟಿಯಾಗುತ್ತಿದೆ. ಕರ್ನಾಟಕ ದರೋಡೆಕೋರರ ರಾಜ್ಯವಾಗುತ್ತಿದೆ ಎಂದು ಗುಡುಗಿದರು.
ಅಧಿಕಾರಿಗಳು ಯಾರು ಸಿಎಂ ಆಗ್ತಾರೆ, ಅವರಿಗೆ ಸೆಲ್ಯೂಟ್ ಹೊಡೆಯೋಣ ಅಂತ ಕಾಯ್ತಿದ್ದಾರೆ. ರಾಜ್ಯದ ಜನರು ತಬ್ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಪಾತಕ್ಕೆ ದೂಡಲಾಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ, ಕುರ್ಚಿ ಜಗಳ ಬಿಟ್ಟು, ಕಾನೂನು ಸುವ್ಯವಸ್ಥೆ ಸರಿಪಡಿಸಲಿ ಎಂದು ಆಗ್ರಹಿಸಿದರು.
ದರೋಡೆ ಕೋರರಿಗೆ ಕರ್ನಾಟಕ ಸ್ವರ್ಗವಾಗುತ್ತಿದೆ. ಕರ್ನಾಟಕ ಲಾಲು ಪ್ರಸಾದ್ ಯಾದವ್ ಅವರ ಬಿಹಾರ ರಾಜ್ಯದ ರೀತಿ ಆಗಿದೆ. ಬೀದರ್ ನಲ್ಲಿ ಹಾಡ ಹಗಲೇ ಎಟಿಎಂ ಗೆ ಹಣ ತುಂಬಲು ಬಂದವರನ್ನು ಕೊಂದು ಹಣ ಲೂಟಿ ಮಾಡಿದ್ದಾರೆ. ಮಂಗಳೂರಿನಲ್ಲಿ ದರೋಡೆ ನಡೆದಿದೆ. 5 ನಿಮಿಷದಲ್ಲಿ 15ಕೋಟಿ ಲೂಟಿಯಾಗಿದೆ. ಇದು ಹಾಲಿವುಡ್, ಬಾಲಿವುಡ್ ಅಲ್ಲ, ಸ್ಯಾಂಡಲ್ ವುಡ್ ಸಿನಿಮಾ. ಸಿಎಂ ಮಂಗಳೂರಿಗೆ ಹೋಗ್ರಾತೆ ಎಂದು ಗೊತ್ತಿದ್ದು ಲೂಟಿ ಹೊಡೆದಿದ್ದಾರೆ. ಕರ್ನಾಟಕದ ಪೊಲೀಸರ ಮೇಲೆ ಎಷ್ಟು ಭಯ ಇದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ಗುಡುಗಿದರು.
ಫಟಾ ಫಟ್ ಅಂತ ನಿಮ್ಮ ಅಕೌಂಟಿಗೆ ಹಣ ಬರುತ್ತೆ ಅಂತ ಹೇಳಿದ್ರು. ಅದೇ ರೀತಿ ಫಾಟಾ ಫಟ್ ಅಂತ ದರೋಡೆಕೋರರು ಲೂಟಿ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ನನಗೆ ಸಿದ್ದರಾಮಯ್ಯ ಅವರ ಮೇಲೆ ಕರುಣೆ ಇದೆ. ಪೊಲೀಸರನ್ನು ಕರೆಸಿ ನೀವೆಲ್ಲಾ ಇದ್ದು ಹೀಗಾಗಿದೆಯಲ್ಲಪ್ಪಾ ಅಂತ ಕೇಳಿದ್ದಾರೆ. ಸಿದ್ದರಾಮಯ್ಯ ಅಸಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಕಿಂಚಿತ್ತಾದ್ರೂ ಭಯ ಇದೆಯಾ.? ಹಾಡು ಹಗಲೇ ದರೋಡೆ ಮಾಡ್ತಾರೆ. ದರೋಡೆಕೋರಿಗೆ ಸ್ವರ್ಗದ ಸರ್ಕಾರ ಆಗಿದೆ. ಹೊರ ರಾಜ್ಯದಿಂದ ಬಂದು ಲೂಟಿ ಮಾಡ್ತಿದ್ದಾರೆ. ಬಂದವರು ವಿಮಾನ, ರೈಲಲ್ಲಿ ವಾಪಸ್ ಹೋಗ್ತಿದ್ದಾರೆ. ಕರ್ನಾಟಕದಲ್ಲಿ ಗೃಹಸಚಿವರು ಇದ್ದಾರಾ ಇಲ್ಲವಾ? ಹಿಂದೆ ಎಲ್ಲರೂ ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡ್ತಿದ್ರು. ಈಗ ಬ್ಯಾಂಕಿಗೆ ಹೋಗಲು ಹೆದರುವಂತಾಗಿದೆ. ಕರ್ನಾಟಕದಲ್ಲಿ ದರೋಡೆಕೋರರ ಜಾತ್ರೆ ನಡೆಯುತ್ತಿದೆ. ರೌಡಿಗಳ ಹಟ್ಟಹಾಸ ನಡೆಯುತ್ತಿದೆ. ಪೊಲೀಸರ ಬಳಿ ಸರಿಯಾದ ವೆಪನ್ಸ್ ಇಲ್ಲ. ದರೋಡೆಕೋರರ ಬಳಿ ಎಲ್ಲಾ ಹೊಸ ಆಯುಧಗಳೂ ಇವೆ. ಪೊಲೀಸರ ಬಳಿ ಗನ್ ಇಲ್ಲ, ಗನ್ ಇದ್ರೆ ಅದಕ್ಕೆ ಬುಲೆಟ್ ಇಲ್ಲ. ಈವರೆಗೂ ಯಾವ ದರೋಡೆಕೋರರನ್ನು ಬಂಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.