ಚೆನ್ನೈ: ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿ, ಒಪ್ಪಿಗೆಯಿಲ್ಲದೆ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಪೋಷಕರನ್ನು ಬಂಧಿಸಲಾಗಿದೆ.
ಚೆನ್ನೈನಲ್ಲಿ ಘಟನೆ ನಡೆದಿದ್ದು, ತಮ್ಮ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿ, ನಂತರ ಹಣ ಸಂಪಾದಿಸಲು ಅಂತರ್ಜಾಲದಲ್ಲಿ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ ದಂಪತಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿ ಮೊಬೈಲ್ ಫೋನ್ ಡೇಟಾದ ಮೂಲಕ ದಂಪತಿಗಳನ್ನು ಪತ್ತೆಹಚ್ಚಿದ್ದಾರೆ. ಪೊಲೀಸರು ಆರೋಪಿಗಳಲ್ಲಿ ಒಬ್ಬನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಅದರಲ್ಲಿ ಅಪ್ರಾಪ್ತ ಬಾಲಕಿಯರ ಹಲವಾರು ವೀಡಿಯೊ ತುಣುಕುಗಳು ಕಂಡುಬಂದಿವೆ.
ಹೆಚ್ಚಿನ ತನಿಖೆಯಲ್ಲಿ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ದಂಪತಿಗಳು ತಮ್ಮ ಸ್ವಂತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿ, ಇತರ ಹುಡುಗಿಯರೊಂದಿಗೆ ಆಕೆಯನ್ನೂ ಚಿತ್ರೀಕರಿಸಿದ್ದಾರೆ. ಆರೋಪಿ ತಂದೆ ಈ ವೀಡಿಯೊಗಳು ಮತ್ತು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ, ತನ್ನ ಮಗಳು ಮತ್ತು ಇತರ ಅಪ್ರಾಪ್ತ ವಯಸ್ಕರನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದ. ಹೆಚ್ಚಿನ ವೀಡಿಯೊಗಳನ್ನು ಹುಡುಗಿಯರ ಒಪ್ಪಿಗೆಯಿಲ್ಲದೆ ಗುಪ್ತ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ದಂಪತಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಈ ಮಧ್ಯೆ, ಅಪ್ರಾಪ್ತ ವಯಸ್ಕ ಸಂತ್ರಸ್ತೆಯನ್ನು ಸರ್ಕಾರಿ ಆರೈಕೆಯಲ್ಲಿ ಇರಿಸಲಾಗಿದೆ. ದಂಪತಿಗಳ ಮೊಬೈಲ್ ಫೋನ್‌ಗಳು ಮತ್ತು ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ.