ಮಂಗಳೂರು: ಮಂಗಳೂರಿನ ಕಂಕನಾಡಿ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಕೈಗೊಂಡ ಸಕಾಲಿಕ ಕ್ರಮದಿಂದಾಗಿ ಹಿರಿಯ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಯಿಂದ ಕಳೆದುಕೊಳ್ಳುತ್ತಿದ್ದ 1.35 ಕೋಟಿ ರೂಪಾಯಿ ರಕ್ಷಣೆ ಮಾಡಲಾಗಿದೆ.
ಹಿರಿಯ ಗ್ರಾಹಕಿಯೊಬ್ಬರು ಬ್ಯಾಂಕ್ ನಲ್ಲಿ 1.35 ಕೋಟಿ ರೂಪಾಯಿ ನಿಶ್ಚಿತ ಠೇವಣಿ ಇಟ್ಟಿದ್ದರು. ಬ್ಯಾಂಕಿಗೆ ಬಂದ ಅವರು ಮ್ಯಾನೇಜರ್ ಬಳಿ ತಮ್ಮ ಹಣ ವಿತ್ ಡ್ರಾ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅವರು ಆತಂಕದಿಂದ ಇರುವುದನ್ನು ಗಮನಿಸಿದ ಮ್ಯಾನೇಜರ್ ಏನೋ ತಪ್ಪಾಗಿದೆ ಎಂದು ಗ್ರಹಿಸಿದ್ದಾರೆ. ಅಲ್ಲದೇ, ಗ್ರಾಹಕಿ ಮತ್ತೊಬ್ಬರೊಂದಿಗೆ ಕರೆಯಲ್ಲಿ ನಿರತರಾಗಿರುವುದನ್ನು ಗಮನಿಸಿದ್ದಾರೆ. ಆಗಾಗ ಹಣ ಪಾವತಿಯ ಅಪ್ಡೇಟ್ ಮಾಡುತ್ತಿರುವುದನ್ನು ಗಮನಿಸಿ ಇದು ಸೈಬರ್ ವಂಚನೆ ಎಂಬ ಅನುಮಾನದಿಂದ ಕ್ರೈಂ ಬ್ರಾಂಚ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹಿರಿಯ ಗ್ರಾಹಕಿಗೆ ಕರೆ ಬಂದ ನಂಬರ್ ಬ್ಲಾಕ್ ಮಾಡಲು ಮತ್ತು ಪ್ರಕರಣ ದಾಖಲಿಸಲು ಸಹಾಯ ಮಾಡಿದ್ದಾರೆ. ಸೈಬರ್ ವಂಚಕರು ತಾವು ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ವಂಚಿಸಲು ಯತ್ನಿಸಿದ್ದರು. ನಿಮ್ಮ ಡೆಬಿಟ್ ಕಾರ್ಡ್ ಸಿಕ್ಕಿದ್ದು, ನಿಮ್ಮ ಹಣವನ್ನು ಆರ್ಬಿಐ ಖಾತೆಗೆ ಜಮಾ ಮಾಡಬೇಕು. ವಂಚನೆಯಲ್ಲಿ ನಿಮ್ಮ ಪಾತ್ರ ಇಲ್ಲದಿದ್ದರೆ ನಿಮ್ಮ ಹಣವನ್ನು ಬಡ್ಡಿ ಸಹಿತ ಕೊಡುತ್ತೇವೆ ಎಂದು ನಂಬಿಸಿದ್ದರು. ಅದನ್ನು ನಂಬಿದ ಮಹಿಳೆ ಅವರು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಲು ಬ್ಯಾಂಕಿಗೆ ಬಂದಿದ್ದ ವೇಳೆ ಮ್ಯಾನೇಜರ್ ಸಕಾಲಿಕ ಕ್ರಮದಿಂದಾಗಿ ಹಣ ರಕ್ಷಣೆಯಾಗಿದೆ. ಡಿಜಿಟಲ್ ಅರೆಸ್ಟ್ ಬಗ್ಗೆ ಅನುಮಾನವಿದ್ದಲ್ಲಿ 1930ಕ್ಕೆ ಕರೆ ಮಾಡಿ ದೂರು ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.