ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಚಿತವಾಗಿ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕಗಳನ್ನು ವಿತರಿಸುವ ಆಶಾಕಿರಣ ಯೋಜನೆಯನ್ನು 13.30 ಕೋಟಿ ರೂ. ಅನುದಾನದಲ್ಲಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಹೆಚ್.ಕೆ. ಪಾಟೀಲ್ ಈಗಾಗಲೇ ಕಲಬುರಗಿ, ಹಾವೇರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ, ಉತ್ತರಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆ ಜಾರಿಯಾಗಿದ್ದು, ಉಳಿದ 22 ಜಿಲ್ಲೆಗಳಲ್ಲಿಯೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಅಸ್ತಿತ್ವದಲ್ಲಿರುವ ಅಂಗಕಸಿ ‘ಜೀವ ಸಾರ್ಥಕತೆ’ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆಯ ಕಸಿಯನ್ನು ಸೇರ್ಪಡೆಗೊಳಿಸಿ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸುತ್ತಿರುವ ಸಿಟಿ ಸ್ಕ್ಯಾನ್, ಎಂ.ಆರ್.ಐ. ಸ್ಕ್ಯಾನ್ ಸೇವೆಯನ್ನು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ, ಉಳಿದವರಿಗೆ ಶೇ. 70ರಷ್ಟು ಶುಲ್ಕ ಭರಿಸುವ ಕುರಿತಾದ ಪ್ರಸ್ತಾವನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.