ಕಣ್ಣೂರು: ಕುಟುಂಬದವರು ಮೃತರೆಂದು ಘೋಷಿಸಿ ಕೇರಳದ ಕಣ್ಣೂರಿನ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದ 67 ವರ್ಷದ ವ್ಯಕ್ತಿಯೊಬ್ಬರು ಪವಾಡಸದೃಶವಾಗಿ ಚೇತರಿಸಿಕೊಂಡಿದ್ದಾರೆ.
ಕೂತುಪರಂಬ ಬಳಿಯ ಪಚಪೊಯ್ಕಾ ನಿವಾಸಿ ಪವಿತ್ರನ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿಯನ್ನು ಮೃತನೆಂದು ಘೋಷಿಸಿ, ಶವಾಗಾರಕ್ಕೆ ಸಾಗಿಸುವ ಮುನ್ನ ಆಸ್ಪತ್ರೆ ಸಿಬ್ಬಂದಿ ಜೀವದ ಚಿಹ್ನೆಗಳನ್ನು ಗಮನಿಸಿದಾಗ ಎಲ್ಲರಿಗೂ ಅಚ್ಚರಿಯಾಗಿದೆ.
ಪವಿತ್ರನ್ ಅವರ ಬೆರಳುಗಳು ನಡುಗುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯ ಸಹಾಯಕ ಜಯನ್, ಜೀವಂತವಾಗಿರುವ ಬಗ್ಗೆ ತಿಳಿಸಿದ್ದಾರೆ. ನಾನು ಅವರ ಬೆರಳುಗಳು ಚಲಿಸುತ್ತಿರುವುದನ್ನು ನೋಡಿದೆ, ನಮ್ಮ ಎಲೆಕ್ಟ್ರಿಷಿಯನ್ ಅನೂಪ್ ಕೂಡ ಅದನ್ನು ದೃಢಪಡಿಸಿದರು. ನಾವು ತಕ್ಷಣ ಅವರ ಸಂಬಂಧಿಕರು ಮತ್ತು ವೈದ್ಯರಿಗೆ ತಿಳಿಸಿದ್ದೇವೆ ಎಂದು ಜಯನ್ ತಿಳಿಸಿದರು.
ಪರೀಕ್ಷೆಯ ನಂತರ, ವೈದ್ಯರು ಪವಿತ್ರನ್ ಅವರ ರಕ್ತದೊತ್ತಡ ಸಾಮಾನ್ಯವಾಗಿದೆ ಎಂದು ಕಂಡುಕೊಂಡರು ಮತ್ತು ಅವರನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
ಪವಿತ್ರನ್ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿದ್ದರು. ಕರ್ನಾಟಕದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ ಬೆಂಬಲದ ಹೆಚ್ಚಿನ ವೆಚ್ಚ ಭರಿಸಲಾಗದೆ ಅವರ ಕುಟುಂಬವು ಸೋಮವಾರ ಅವರನ್ನು ಮನೆಗೆ ಕರೆತರಲು ನಿರ್ಧರಿಸಿತ್ತು.
ವೆಂಟಿಲೇಟರ್ ಬೆಂಬಲವಿಲ್ಲದೆ ಪವಿತ್ರನ್ ಬದುಕುಳಿಯುವುದಿಲ್ಲ ಮತ್ತು ಅದನ್ನು ತೆಗೆದುಹಾಕಿದರೆ ಕೆಲವೇ ನಿಮಿಷಗಳಲ್ಲಿ ಸಾಯುತ್ತಾನೆ ಎಂದು ಮಂಗಳೂರಿನ ವೈದ್ಯರು ಎಚ್ಚರಿಸಿದ್ದರು.
ಐದು ಗಂಟೆಗಳಿಗೂ ಹೆಚ್ಚು ಕಾಲದ ಆಂಬ್ಯುಲೆನ್ಸ್ ಪ್ರಯಾಣದಲ್ಲಿ, ಪವಿತ್ರನ್ ಅವರು ಜೀವನದ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಭಾವಿಸಿ ಎಕೆಜಿ ಸ್ಮಾರಕ ಸಹಕಾರಿ ಆಸ್ಪತ್ರೆಗೆ ಕರೆತಂದಿದೆ. ಅವರ “ಶವ”ವನ್ನು ಶವಾಗಾರದಲ್ಲಿ ಇಡಲು ವ್ಯವಸ್ಥೆ ಮಾಡಿ ಮರುದಿನ ಅವರ ಅಂತ್ಯಕ್ರಿಯೆಯನ್ನು ನಡೆಸಲು ಯೋಜಿಸಿದೆ.
ಪವಿತ್ರನ್ ಈಗ ಐಸಿಯುನಲ್ಲಿದ್ದಾರೆ ಮತ್ತು ಚಿಕಿತ್ಸೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಕಣ್ಣು ತೆರೆಯುತ್ತಿದ್ದಾರೆ. ಪ್ರತಿಕ್ರಿಯಿಸುತ್ತಿದ್ದಾರೆ, ಆದರೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.