ಕೊಪ್ಪಳ: ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿರುವ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ, ಬಿ.ಎಸ್.ಯಡಿಯುರಪ್ಪ ರಾಜ್ಯ ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ್ದರು. ಮಗನ ಸ್ಥಾನ ಭದ್ರಪಡಿಸಲೋ ಅಥವಾ ಪಕ್ಷ ಭದ್ರಪಡಿಸಲೋ ಎಂಬುದನ್ನು ಯಡಿಯೂರಪ್ಪ ಸ್ಪಷ್ಟಪಡಿಸಲಿ ಎಂದು ಹೇಳಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಜಯೇಂದ್ರ ರಮೇಶ್ ಜಾರಕಿಹೊಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಮೇಶ್ ಜಾರಕಿಹೊಳಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ. ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಯಡಿಯೂರಪ್ಪ ಓರ್ವ ಮುತ್ಸದ್ದಿ ರಾಜಕಾರಣಿ. ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಿದವರು. ಅವರ ಬಗ್ಗೆ ಮಾತನಾಡಲು ರಮೇಶ್ ಜಾರಕಿಹೊಳಿ ಯಾರು? ಇವರು ಇತ್ತೀಚೆಗೆ ಪಕ್ಷಕ್ಕೆ ಬಂದವರು. ಇನ್ನು ನನ್ನ ಬಗ್ಗೆ ರಾಮೇಶ್ ಜಾರಕಿಹೊಳಿ ಮಾತನಾಡುವಾಗ ನಿಗಾ ಇರಲಿ. ನಾನು ಒಂದು ಪಕ್ಷದ ಅಧ್ಯಕ್ಷನಾಗಿದ್ದೇನೆ ಎಂದು ಗುಡುಗಿದರು.
ಇಷ್ಟಕ್ಕೂ ರಮೇಶ್ ಜಾರಕಿಹಿಳಿ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಅವರಿಗೆ ಏನೇ ಸಮಸ್ಯೆಗಳಿದ್ದರೂ ದೆಹಲಿ ನಾಯಕರೊಂದಿಗೆ ಮಾತನಾಡಲಿ. ನಾನೂ ಅಲ್ಲಿಯೇ ಉತ್ತರಗಳನ್ನು ಕೊಡಲು ಸಿದ್ಧನಿದ್ದೇನೆ ಎಂದರು.