ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ -ಚಂದ್ರಗುತ್ತಿ ರಸ್ತೆಯಲ್ಲಿ ಬಾಲೆಕೊಪ್ಪ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ಕಾರ್ ನುಗ್ಗಿಸಿದ್ದು, ಯುವತಿ ಮೃತಪಟ್ಟು ಎಂಟು ಜನ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸಿದ್ಧಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸಾವಿರಾರು ಜನ ಜಾತ್ರೆಯಲ್ಲಿ ಸೇರಿದ್ದರು. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿತ್ತು. ಹೀಗಿದ್ದರೂ ತಡೆಗೋಡೆ ಮತ್ತು ಬ್ಯಾರಿಕೇಡ್ ಗಳನ್ನು ಕೆಡವಿ ಕಾರ್ ಚಾಲನೆ ಮಾಡಿಕೊಂಡು ನುಗ್ಗಿದ ವ್ಯಕ್ತಿ ಅಪಘಾತ ನಡೆಸಿದ್ದಾನೆ.
ಸಿದ್ದಾಪುರ ತಾಲೂಕಿನ ಕಸ್ತೂರು ಕಲಕೊಪ್ಪದ ದೀಪಾ ರಾಮಗೊಂಡ(21) ಮೃತಪಟ್ಟಿದ್ದಾರೆ. ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕಾರ್ ಚಾಲಕ ರೋಷನ್ ಫರ್ನಾಂಡಿಸ್ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.