ಬೆಳಗಾವಿ: ಮಕರ ಸಂಕ್ರಾಂತಿ ದಿನದಂದೇ ಅತ್ತೆಯನ್ನೇ ಚಾಕುವಿನಿಂದ ಇರಿದು ಅಳಿಯ ಕೊಲೆ ಮಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶುಭಂ ದತ್ತಾ ಬಿರ್ಜೆ, ಆತನ ತಂದೆ ದತ್ತಾ ಬಿರ್ಜೆ ಹಾಗೂ ತಾಯಿ ಸುಜಾತಾ ಬಿರ್ಜೆ ಬಂಧಿತ ಆರೋಪಿಗಳು. ಬೆಳಗಾವಿಯ ರಾಯತ್ ಗಲ್ಲಿಯಲ್ಲಿ ಇಂದು ಮಧ್ಯಾಹ್ನ ನಡೆದಿದ್ದ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ.
ಶುಭಂ ಬಿರ್ಜೆ 7 ತಿಂಗಳ ಹಿಂದಷ್ಟೇ ರೇಣುಕಾ ಪದ್ಮುಖಿ ಎಂಬುವವರ ಮಗಳನ್ನು ರಜಿಸ್ಟರ್ ಮ್ಯಾರೇಜ್ ಆಗಿದ್ದ. ಮೂರು ದಿನಗಳಿಂದ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಕೆಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸದೇ ಉದ್ಧಟತನ ಮೆರೆದಿದ್ದ. ಇದಕ್ಕೆ ಶುಭಂ ಬಿರ್ಜೆ ಮನೆಯವರೂ ಸಾಥ್ ನೀಡಿದ್ದರು. ಮಗಳ ಆರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದರೂ ಅಳಿಯ ಸರಿಯಾಗಿ ನೋಡಿಕೊಳ್ಳದ ಕಾರಣ ರೇಣುಕಾ ಮನೆ ಬಳಿ ಬಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮಗಳಿಗೆ ತಾವೇ ಚಿಕಿತ್ಸೆ ಕೊಡಿಸಿದ್ದರು.
ಇದೇ ವಿಚಾರವಾಗಿ ರೇಣುಕಾ ಹಾಗೂ ಅಳಿಯನ ಮನೆಯವರ ನಡುವೆ ಮಾತಿಗೆ ಮಾತು ಶುರುವಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಸಿಟ್ಟಿಗೆದ್ದ ಅಳಿಯ ಶುಭಂ ಬಿರ್ಜೆ ಅತ್ತೆಯನ್ನು ಇರಿದೇ ಬಿಟ್ಟಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ರೇಣುಕಾರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶುಭಂ ಹಾಗೂ ಆತನ ತಂದೆ-ತಾಯಿಯನ್ನು ಬಂಧಿಸಿದ್ದಾರೆ.