ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆಗೆ ಸಬಂಧಿಸಿದಂತೆ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಇದು ಹಿಂದುಗಳನ್ನು ಹೆದರಿಸಲು ಮಾಡಿರುವ ದುಷ್ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದಿದ್ದಾರೆ. ಘಟನೆ ಬೆನ್ನಲ್ಲೇ ವಿಪಕ್ಷ ನಾಯಕ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಇಲ್ಲಿನ ಪಶು ಆಸ್ಪತ್ರೆ ಉಳಿವಿಗಾಗಿ ಈ ಹಿಂದೆ ಹೋರಾಟ ಮಾಡಲಾಗಿತ್ತು. ಆ ಹೋರಾಟದಲ್ಲಿ ಈ ಹಸುಗಳು ಕೂಡ ಭಾಗಿಯಾಗಿದ್ದವು. ಬ್ರಿಟಿಷರ ಕಾಲದಿಂದಲೂ ಇರುವ ಪಶು ಆಸ್ಪತ್ರೆ ಉಳಿವಿಗಾಗಿ ನಡೆದಿದ್ದ ಬೃಹತ್ ಹೋರಾಟಕ್ಕೆ ಈ ಹಸುಗಳನ್ನು ಬಳಸಿಕೊಂಡಿದ್ದರಿಂದ ಇಂದು ಮೂಕಪ್ರಾಣಿಗಳಾಗಿರುವ ಈ ಹಸುಗಳ ಮೇಲೆ ದುಷ್ಕೃತ್ಯವೆಸಗಲಾಗಿದೆ. ಇದೆಂಥಹ ಮನಸ್ಥಿತಿ. ಹಿಂದುಗಳನ್ನು ಹೆದರಿಸಲೆಂದು ಈ ರೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕ್ರಾಂತಿಯ ಹೊತ್ತಲ್ಲಿ. ಈ ಘಟನೆ ನಡೆದಿದೆ. ಸಂಕ್ರಮಣದ ಸಂದರ್ಭದಲ್ಲಿ ಹಸುಗಳನ್ನು, ಗೋವುಗಳನ್ನು ಪೂಜಿಸುವುದು ನಮ್ಮ ಸಂಸ್ಕೃತಿ. ಹಸುವನ್ನು ಗೋಮಾತೆ ಎಂದು ಪೂಜಿಸುತ್ತೇವೆ. ಆದರೆ ಹಸುಗಳ ಮೇಲೆ ಇಂದು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ ಕೆಚ್ಚಲನ್ನು ಕೊಯ್ದಿದ್ದಾರೆ, ಕಾಲುಗಳಿಗೂ ಗಾಯ ಮಾಡಿದ್ದಾರೆ. ಹಿಂದುಗಳಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಇವರು? ಸರ್ಕಾರ ತಪ್ಪಿತಸ್ಥರ ವಿರುದ್ಧ ತಕ್ಷಣ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ ಕರಾಳ ಸಂಕ್ರಾಂತಿಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.