ಬೆಂಗಳೂರು: ಎಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ. ತಿರುಪತಿ, ಬೆಂಗಳೂರು, ಮೈಸೂರು, ಸೇರಿದಂತೆ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ ಸ್ವಾಮಿ ದೇವಾಲಯಗಳಲ್ಲಿ ಭಕ್ತರ ದಂಡೇ ನೆರೆದಿದೆ.
ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿದೆ. ಕೆಲವು ದೇವಾಲಯಗಳಲ್ಲಿ ಸಪ್ತ ದ್ವಾರ ಮೂಲಕ ಹಾದು ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೈಕುಂಠ ಏಕಾದಶಿಯಂದು ದೇವಾಲಯಗಳಿಗೆ ಬಂದ ಭಕ್ತರಿಗೆ ತೊಂದರೆಯಾಗದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ತೀರ್ಥ, ಪ್ರಸಾದ ವಿತರಣೆ ಮಾಡಲಾಗಿದೆ.
ಪ್ರಮುಖ ದೇವಸ್ಥಾನದಲ್ಲಿ ಭಾರಿ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ವೈಕುಂಠ ಏಕಾದಶಿ ದಿನ ದೇವರ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಅಪಾರ ಸಂಖ್ಯೆಯ ಭಕ್ತರು ದೇಗುಲಗಳಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ.
ಎರಡು ದಿನಗಳ ಹಿಂದೆ ಕಾಲ್ತುಳಿತದಲ್ಲಿ 6 ಜನ ಸಾವನ್ನಪ್ಪಿದ ತಿರುಪತಿಯಲ್ಲಿಯೂ ಲಕ್ಷಾಂತರ ಭಕ್ತರು ದರ್ಶನಕ್ಕೆ ಕಾದಿದ್ದಾರೆ. ಇನ್ನು ರಾಜ್ಯದ ಬಹುತೇಕ ದೇವಾಲಯಗಳಲ್ಲಿಯೂ ಭಕ್ತರ ದಂಡೇ ನೆರೆದಿದೆ.