ಬೆಂಗಳೂರು: ಬಹುಮಹಡಿ ಖಾಸಗಿ ಆ ಅಪಾರ್ಟ್ಮೆಂಟ್ ನ 7ನೇ ಮಹಡಿಯಿಂದ ಆಯತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೈಟ್ ಫೀಲ್ಡ್ ನ ಗಾಂಧಿಪುರ ನಿವಾಸಿ ಕೃಷ್ಣ(43) ಮೃತಪಟ್ಟ ಕಾರ್ಮಿಕ. ಹೆಗಡೆ ನಗರ ಮುಖ್ಯರಸ್ತೆಯ ಕೆ ನಾರಾಯಣಪುರದ ಕ್ರಿಸಾಂತಮ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಅನೇಕ ವರ್ಷಗಳಿಂದ ಕೃಷ್ಣ ಕಟ್ಟಡಗಳ ಕ್ರಾಕ್ ಫಿಲ್ಲಿಂಗ್, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ಅಪಾರ್ಟ್ಮೆಂಟ್ ನ 7ನೇ ಮಹಡಿಯಲ್ಲಿ ಕ್ರಾಕ್ ಫಿಲ್ಲಿಂಗ್ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ಪತಿಯ ಸಾವಿಗೆ ಕಾರಣವೆಂದು ಕೃಷ್ಣ ಅವರ ಪತ್ನಿ ಶಾಂತಮ್ಮ ಆರೋಪಿಸಿ ದೂರು ನೀಡಿದ್ದಾರೆ. ಅಪಾರ್ಟ್ಮೆಂಟ್ ಮ್ಯಾನೇಜರ್ ನರೇಂದ್ರ ಬಾಬು, ಗುತ್ತಿಗೆದಾರ ಕೃಷ್ಣ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.