ಬೆಂಗಳೂರು: ಬಸ್ ಪ್ರಯಾಣ ದರ ಶೇ. 15 ರಷ್ಟು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾಮಾನ್ಯ ಪಾಸ್ ಗಳು ಸೇರಿದಂತೆ ಎಲ್ಲಾ ರೀತಿಯ ಪಾಸ್ ಗಳ ದರವನ್ನು ಹೆಚ್ಚಳ ಮಾಡಿ ಆದೇಶಿಸಿದೆ.
ಕಳೆದ ಭಾನುವಾರದಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣದ ಹೆಚ್ಚಳ ಮಾಡಿದ್ದು, ಇದೀಗ ಬಿಎಂಟಿಸಿ ವಿದ್ಯಾರ್ಥಿ ಪಾಸ್ ಹೊರತುಪಡಿಸಿ ಉಳಿದ ಎಲ್ಲಾ ಪಾಸುಗಳ ದರ ಹೆಚ್ಚಳ ಮಾಡಿದ್ದು, ಜನವರಿ 9 ರಿಂದ ಜಾರಿಗೆ ಬರಲಿದೆ.
ವಾಯು ವಜ್ರ ಸೇರಿದಂತೆ ಹವಾನಿಯಂತ್ರಿತ ಬಸ್ ಪಾಸ್ ಗಳ ದರ ಹೆಚ್ಚಳದ ಜೊತೆಗೆ ಹೆಚ್ಚುವರಿಯಾಗಿ ಜಿಎಸ್ಟಿ ಅನ್ವಯವಾಗುತ್ತದೆ. ವಜ್ರ ದೈನಂದಿನ ಪಾಸು, ಮಾಸಿಕ ಪಾಸು ಪಡೆದವರು ಪಾಸ್ ಗಳ ದರದ ಮೇಲೆ ಟೋಲ್ ಶುಲ್ಕವನ್ನು ಹೆಚ್ಚುವರಿಗಾಗಿ ಪಾವತಿಸಬೇಕಿದೆ.
ಖಾಸಗಿ ಸಂಸ್ಥೆ ಕಾರ್ಖಾನೆಗಳಿಗೆ ಸೇವೆ ನೀಡುವ ಬಸ್ ಗಳಲ್ಲಿ ಪ್ರಯಾಣಿಸುವ ನೌಕರರಿಗೆ ನೀಡುವ ಡೆಡಿಕೇಟೆಡ್ ಪಾಸ್ ಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಕನಿಷ್ಠ 2500 ರೂ. ಮೊತ್ತದ ಪಾಸ್ ದರ 3,000 ರೂ., ಗರಿಷ್ಠ 2800 ಇದ್ದ ಪಾಸ್ ದರ 5,000 ರೂ.ಗೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ.
ಸಾಮಾನ್ಯ ಸಾಪ್ತಾಹಿಕ 300 ರಿಂದ 350 ರೂ., ಹಿರಿಯ ನಾಗರಿಕರು 945 ರೂ.ನಿಂದ 1080 ರೂ., ಸಾಮಾನ್ಯ ಮಾಸಿಕ 1050 ರೂ.ನಿಂದ 1,200 ರೂ., ನೈಸ್ ರಸ್ತೆ ಸಾಮಾನ್ಯ 2200 ರೂ.ನಿಂದ 2350 ರೂ., ವಜ್ರ ಮಾಸಿಕ 1800 ರೂ.ನಿಂದ 2000 ರೂ., ವಾಯುವಜ್ರ ಮಾಸಿಕ 3755 ರೂ.ನಿಂದ 4000 ರೂ. ಆಗಿದೆ.