ಬೆಂಗಳೂರು: 15 ವರ್ಷದ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕನನ್ನು ಜೆಪಿ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಅಭಿಷೇಕ್ ಗೌಡ(30) ಬಂಧಿತ ಆರೋಪಿ ನವೆಂಬರ್ 23 ರಂದು ಟ್ಯೂಷನ್ ಗೆ ಬಂದಿದ್ದ ಬಾಲಕಿ ಮನೆಗೆ ವಾಪಸ್ ತೆರಳಿರಲಿಲ್ಲ. ಬಾಲಕಿಯ ತಂದೆ ಟುಷನ್ ಶಿಕ್ಷಕ ಅಭಿಷೇಕ್ ಗೌಡ ತಮ್ಮ ಮಗಳನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಅಪಹರಿಸಿರುವುದಾಗಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಆರೋಪಿ ಬಂಧಿಸಿ ಬಾಲಕಿಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.
ಕನಕಪುರದ ಹಾರೋಹಳ್ಳಿ ಮೂಲದ ಅಭಿಷೇಕ ಜೆಪಿ ನಗರದ ಒಂದನೇ ಹಂತದ ಆಂಜನೇಯ ದೇವಾಲಯ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ವಿವಾಹಿತನಾಗಿರುವ ಅಭಿಷೇಕ್ ಗೌಡ ಜಿಮ್ ಟ್ರೇನರ್ ಆಗಿದ್ದು, ವಿದ್ಯಾರ್ಥಿಗಳಿಗೆ ಟ್ಯೂಷನ್ ಮಾಡುತ್ತಿದ್ದಾರೆಂದು ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ಮನೆಯಲ್ಲಿ ಮೊಬೈಲ್, ಸಿಮ್ ಕಾರ್ಡ್ ಬಿಟ್ಟು ತೆರಳಿದ್ದ. ಮಳವಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದ. ಹೊಸದಾಗಿ ಮದುವೆಯಾಗಿರುವುದಾಗಿ ಮನೆ ಮಾಲೀಕರಿಗೆ ತಿಳಿಸಿದ್ದ. ಮಾಧ್ಯಮಗಳಲ್ಲಿ ಅಭಿಷೇಕ್ ಗೌಡ ಬಗ್ಗೆ ನೋಡಿದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.