ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಮೂರು ಮಕ್ಕಳ ಸಮೇತ 7 ಜನರನ್ನು ಮನೆಯಿಂದ ಹೊರಹಾಕಿದ್ದು, ಚಳಿಯಲ್ಲಿ ಹಸಿಗೂಸಿನ ಜೊತೆ ಬಾಣಂತಿ ಹೊರ ಮಲಗಿದ್ದಾರೆ. ಸಾಲ ಮರುಪಾವತಿ ಮಾಡಿಲ್ಲವೆಂದು ಮನೆ ಸೀಜ್ ಮಾಡಲಾಗಿದೆ. ಸೈದಪ್ಪ ಅವರು ಚಿಕ್ಕೋಡಿಯ ಇಕ್ವಿಟಾಸ್ ಫೈನಾನ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು.
ಅವರು ಎರಡೂವರೆ ವರ್ಷದ ಹಿಂದೆ ಹೈನುಗಾರಿಕೆಗಾಗಿ 5 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಖರೀದಿಸಿದ್ದ ಎರಡು ಎಮ್ಮೆ ಸಾವು ಕಂಡಿದ್ದವು. ಹೀಗಿದ್ದರೂ ಮಾಸಿಕ 14397 ರೂ.ನಂತೆ 27 ಕಂತುಗಳನ್ನು ಪಾವತಿಸಿದ್ದರು. ಮಗಳ ಹೆರಿಗೆಗೆ 85,000 ರೂ. ಖರ್ಚು ಮಾಡಿದ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ರೈತ ಸೈದಪ್ಪ ಕಂತು ಕಟ್ಟಿರಲಿಲ್ಲ.
ಆದರೆ ಇದುವರೆಗೂ ಕಟ್ಟಿದ್ದ ಹಣ ಕಂಪನಿಗೆ ಮುಟ್ಟಿಲ್ಲ. 5 ಲಕ್ಷ ರೂ. ಸಾಲ ಕಟ್ಟುವಂತೆ ವಕೀಲರ ಮೂಲಕ ನೋಟಿಸ್ ನೀಡಿ ಮನೆ ಸೀಜ್ ಮಾಡಲಾಗಿದೆ. ಮೂಡಲಗಿ ಠಾಣೆ ಪೊಲೀಸರ ಮೂಲಕ ಮನೆ ಸೀಜ್ ಮಾಡಿದ್ದು, ಹಣ ಕಟ್ಟಲು ಸಮಯ ಕೇಳಿದರೂ ಅಮಾನವೀಯವಾಗಿ ವರ್ತಿಸಲಾಗಿದೆ. ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತಿಸಿ ಹಸುಗೂಸು ಸೇರಿ ಬಾಣಂತಿ ಮಕ್ಕಳು, ಮನೆಯವರನ್ನು ಫೈನಾನ್ಸ್ ಸಿಬ್ಬಂದಿ ಮತ್ತು ಪೊಲೀಸರು ಹೊರಗೆ ಹಾಕಿದ್ದಾರೆ.