alex Certify BREAKING: ನಾಡಿನ ಹಿರಿಯ ಸಾಹಿತಿ ನಾ. ಡಿಸೋಜ ವಿಧಿವಶ | Veteran writer Na. D’Souza passed away | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ನಾಡಿನ ಹಿರಿಯ ಸಾಹಿತಿ ನಾ. ಡಿಸೋಜ ವಿಧಿವಶ | Veteran writer Na. D’Souza passed away

ಶಿವಮೊಗ್ಗ: ಹಿರಿಯ ಸಾಹಿತಿ ನಾ. ಡಿಸೋಜ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರ ಪುತ್ರ ನವೀನ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ತಂದೆಯ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಜನವರಿ 5ರಂದು ಸಂಜೆ 7:30ಕ್ಕೆ ಅನಾರೋಗ್ಯದ ಕಾರಣ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪೂಜ್ಯ ತಂದೆ ದೈವಾಧೀನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದು ತಿಳಿಸಿದ್ದಾರೆ.

ನಾ. ಡಿಸೋಜ ಕುರಿತು…

ನಾ. ಡಿಸೋಜ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದಾರೆ.

ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು(ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು. ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು. ನಾ. ಡಿಸೋಜರವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ೧೯೯೫ರಲ್ಲಿ ನಿವೃತ್ತಿಹೊಂದಿದರು.

ಪ್ರಸಿದ್ಧ ಚಲನಚಿತ್ರಗಳಾದ ಕಥೆಗಳು

ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ಶರಾವತಿ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿರುವ ‘ಮುಳುಗಡೆ’ ಕಾದಂಬರಿಯು ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ, ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ(ಚಲನಚಿತ್ರ)’, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನುರವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ. ಇವುಗಳಲ್ಲಿ ‘ಕಾಡಿನ ಬೆಂಕಿ’ ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ, ‘ದ್ವೀಪ’ ಚಿತ್ರ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ. ದೂರದರ್ಶನ ಮಾಧ್ಯಮದಲ್ಲಿ ಸಹ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.

ಪಠ್ಯಪುಸ್ತಕಗಳಲ್ಲಿ

‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗದ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವೂ ಸೇರಿದಂತೆ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.

ಮಕ್ಕಳ ಸಾಹಿತ್ಯ

ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿರುವ ನಾ.ಡಿಸೋಜ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ ೧೨ ಕೃತಿಗಳನ್ನು ಪ್ರಕಟಿಸಿದ್ದಾರೆ

ಇತರ ಭಾಷೆಗಳಲ್ಲಿ

ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ, ಪ್ರೀತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ, ತಿರುವು ಮುಂತಾದ ಕಾದಂಬರಿಗಳು ಕೊಂಕಣಿಗೆ, ಇಗರ್ಜಿ ಕಾದಂಬರಿ, ದ್ವೀಪ, ಬಾಲಗಂಧರ್ವ ಮತ್ತು ಏಸುಕ್ರಿಸ್ತ ಕೃತಿಗಳು ಇಂಗ್ಲಿಷ್‌ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿಯು ಹಿಂದಿ ಭಾಷೆಗೂ ಅನುವಾದಗೊಂಡಿದೆ.

ನಾ ಡಿಸೋಜ ರಚಿಸಿರುವ ಕೃತಿಗಳು

ಅಜ್ಞಾತ, ಆಸರೆ, ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು, ಇಗರ್ಜಿಯ ಸುತ್ತಲಿನ ಮನೆಗಳು, ಈ ನೆಲ ಈ ಜಲ, ಒಂದು ಜಲಪಾತದ ಸುತ್ತ, ಒಡ್ಡು, ಕಾಡಿನ ಬೆಂಕಿ, ಕುಂಜಾಲು ಕಣಿವೆಯ ಕೆಂಪು ಹೂವು ಮುಂತಾದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...