ನವದೆಹಲಿ: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಹೊಟ್ಟೆಯಿಂದ ಶೇವಿಂಗ್ ರೇಜರ್ ತೆಗೆದಿದ್ದಾರೆ.
ತನ್ನ ತಂದೆಯೊಂದಿಗೆ ಜಗಳವಾಡಿದ ನಂತರ ಕೋಪದ ಭರದಲ್ಲಿ ಶೇವಿಂಗ್ ರೇಜರ್ ನುಂಗಿದ 20 ವರ್ಷದ ಯುವಕನಿಗೆ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಬ್ಲೇಡ್ ಹೋಲ್ಡರ್ ಮತ್ತು ಹ್ಯಾಂಡಲ್ ಒಳಗೊಂಡ ರೇಜರ್ ಅನ್ನು ನುಂಗಿದ್ದು, ಅವನ ಜೀವಕ್ಕೆ ಅಪಾಯವನ್ನುಂಟುಮಾಡಿತ್ತು. ಅವರ ತಂದೆ ಕೂಡ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.
ಬ್ಲೇಡ್ ಹೋಲ್ಡರ್ ಯುವಕನ ಹೊಟ್ಟೆಯಲ್ಲಿದೆ ಎಂಬುದು ಸ್ಕ್ಯಾನ್ ನಲ್ಲಿ ಗೊತ್ತಾಗಿದೆ. ಆದರೆ, ಹ್ಯಾಂಡಲ್ ದೊಡ್ಡ ಕರುಳಿಗೆ ಹೋಗಿತ್ತು. ಡಾ ತರುಣ್ ಮಿತ್ತಲ್ ನೇತೃತ್ವದ ಡಾ. ಅನ್ಮೋಲ್ ಅಹುಜಾ, ಡಾ. ಶ್ರೇಷ್ಠ್ ಮಾಂಗ್ಲಿಕ್, ಡಾ. ರಾಕೇಶ್, ಎಸ್, ಡಾ ಕಾರ್ತಿಕ್ ಕೃಷ್ಣ ಮತ್ತು ಡಾ ತನುಶ್ರೀ ನಹತಾ ಸೇರಿದಂತೆ ವೈದ್ಯರ ತಂಡ ಚಿಕಿತ್ಸೆಗೆ ಎರಡು ಹಂತದ ಕಾರ್ಯವಿಧಾನವನ್ನು ನಡೆಸಿತು.
ಮೊದಲಿಗೆ, ಲ್ಯಾಪರೊಟಮಿ ಮಾಡಿ ಬ್ಲೇಡ್ ಅನ್ನು ತೆಗೆದುಹಾಕಲು ಹೊಟ್ಟೆಯನ್ನು ತೆರೆಯಲಾಯಿತು. ನಂತರ, ಕೊಲೊನ್‌ನಲ್ಲಿ ಕಂಡುಬಂದ ಹಿಡಿಕೆಯನ್ನು ಬಹಳ ಸೂಕ್ಷ್ಮವಾಗಿ ದೂರ ತಳ್ಳಲಾಯಿತು. ಸಿಗ್ಮೋಯ್ಡೋಸ್ಕೋಪಿ ಬಳಸಿ, ಹ್ಯಾಂಡಲ್ ಅನ್ನು ಸಹ ತೆಗೆದುಹಾಕಲಾಗಿದೆ. ಇದು ವಿಚಿತ್ರವಾದ ಪ್ರಕರಣವಾಗಿದ್ದು, ಉತ್ತಮ ವೈದ್ಯಕೀಯ ಆರೈಕೆ ಮತ್ತು ರೋಗಿಯ ಮಾನಸಿಕ ಆರೋಗ್ಯಕ್ಕೆ ಸೂಕ್ಷ್ಮತೆಯ ಚಿಕಿತ್ಸೆ ಅಗತ್ಯವಿರುತ್ತದೆ ಎಂದು ಡಾ. ಮಿತ್ತಲ್ ಹೇಳಿದ್ದಾರೆ.