ಬೆಂಗಳೂರು: ಗ್ರಾಹಕರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಒರಾಯನ್ ಮಾಲ್ ನ ಅಡ್ವೆಂಚರ್ ಗೇಮ್ ವಿಭಾಗದ ಆಡಳಿತ ಮಂಡಳಿ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆ ಅಡ್ವೆಂಚರ್ ಗೇಮ್ ನಲ್ಲಿ ಆಟವಾಡುವಾಗ ಕಲ್ಯಾಣನಗರದ ಪ್ಯಾಟ್ರಿಕ್ ಕುಮಾರ್ ಎಂಬುವರ ಪುತ್ರ ನಿರಂಜನ್ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಮಾಲ್ ನ ಬೌನ್ಸ್ ಐಎನ್‌ಸಿ ಟ್ರ್ಯಾಂಪೋಲೈನ್ ಫೆಸಿಲಿಟಿ ಕಂಪನಿ ಮಾಲೀಕನ ವಿರುದ್ಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕುಟುಂಬ ಸಮೇತರಾಗಿ ಪ್ಯಾಟ್ರಿಕ್ ಕುಮಾರ್ ಇತ್ತೀಚೆಗೆ ಒರಾಯನ್ ಮಾಲ್ ಗೆ ಭೇಟಿ ನೀಡಿದ್ದರು. ಮಾಲ್ ನ ನಾಲ್ಕನೇ ಮಹಡಿಯಲ್ಲಿರುವ ಅಡ್ವೆಂಚರ್ ಗೇಮ್ ನಲ್ಲಿ ನಿರಂಜನ್ ಆಟವಾಡುವಾಗ ಬಿದ್ದು ಕಾಲು ಮುರಿದುಕೊಂಡಿದ್ದ. ಗ್ರಾಹಕರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಆಂಬುಲೆನ್ಸ್ ಅಥವಾ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯು ಸ್ಥಳದಲ್ಲಿ ಇರಲಿಲ್ಲ. ತಮ್ಮ ಪುತ್ರ ಗಾಯಗೊಂಡ 45 ನಿಮಿಷಗಳ ನಂತರ ವೈದ್ಯಕೀಯ ನೆರವು ದೊರೆತಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದ ಮಾಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ಯಾಟ್ರಿಕ್ ಕುಮಾರ್ ಒತ್ತಾಯಿಸಿದ್ದಾರೆ.