HomeKarnataka"ಅಸ್ಮಿತೆ ವ್ಯಾಪಾರಮೇಳ-2024": ಸ್ವ-ಸಹಾಯ ಗುಂಪಿನ ಮಹಿಳೆಯರ, ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ, ಮಾರಾಟಕ್ಕೆ ನಾಳೆ ಸಿಎಂ...

“ಅಸ್ಮಿತೆ ವ್ಯಾಪಾರಮೇಳ-2024”: ಸ್ವ-ಸಹಾಯ ಗುಂಪಿನ ಮಹಿಳೆಯರ, ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ, ಮಾರಾಟಕ್ಕೆ ನಾಳೆ ಸಿಎಂ ಚಾಲನೆ

ಬೆಳಗಾವಿ: ದುಡಿಯುವ ವರ್ಗಗಳ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ರಾಜ್ಯ ಸರ್ಕಾರದ ಕಾಳಜಿಯ ಮತ್ತೊಂದು ಕುರುಹಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟವನ್ನು ನಾಳೆ ಡಿ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.‌

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ  ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಈ ಮೇಳವನ್ನು ಡಿಸೆಂಬರ್‌ 26 ರಿಂದ ಜನವರಿ 4 ರವರೆಗೆ ಆಯೋಜಿಸಲಾಗಿದೆ.

“ಅಸ್ಮಿತೆ ವ್ಯಾಪಾರಮೇಳ-2024” ಹೆಸರಿನಲ್ಲಿ ಮುಖ್ಯಮಂತ್ರಿಗಳ ಕನಸು ಮತ್ತು ಕಾಳಜಿಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಸಾಕಾರಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರಮಿಕ ವರ್ಗದ ಮಹಿಳಾ ಶಕ್ತಿಯನ್ನು ಆರ್ಥಿಕವಾಗಿ ಮೇಲೆತ್ತಬೇಕು ಎನ್ನುವ ಮುಖ್ಯ ಉದ್ದೇಶದೊಂದಿಗೆ ಹಲವಾರು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್‌ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.

ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚಿನ ವಹಿವಾಟಿನೊಂದಿಗೆ ಅವರ ಆರ್ಥಿಕ ಸಬಲತೆಗೆ ಕೈ ಜೋಡಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಲಾಗಿದೆ.

ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ಹಳ್ಳಿ ಸಂತೆ, ತಾಲ್ಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳನ್ನು ಆಯೋಜಿಸುವ ಮೂಲಕ ಮಾರುಕಟ್ಟೆ ಒದಗಿಸಲಾಗುತ್ತಿದೆ.

ಬೆಳಗಾವಿಯಲ್ಲಿ ಕಳೆದ 3 ವರ್ಷದಿಂದ ಬೃಹತ್‌ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 6.30 ರಿಂದ 9.00 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಒಟ್ಟು 150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮಳಿಗೆಗಳನ್ನು ಒಳಗೊಂಡಿದೆ.

ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಡಿಸೆಂಬರ್‌ 26ರ ಬೆಳಗ್ಗೆ 10.30 ರಿಂದ ರಾತ್ರಿ 9.30 ರವರೆಗೆ ಪ್ರದರ್ಶನವಿರಲಿದೆ.

ಪ್ರದರ್ಶನಗೊಳ್ಳುವ ಆಕರ್ಷಕ ವಸ್ತುಗಳು:

ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ಅಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್‌ಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು.

ಅಕ್ಕ ಕೆಫೆ ಮಾದರಿ:

ಸರ್ಕಾರವು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ 50 ಅಕ್ಕ ಕೆಫೆಗಳನ್ನು ಒಂದೇ ಮಾದರಿ ವಿನ್ಯಾಸದಡಿ ಅನುಷ್ಠಾನಗೊಳಿಸಲಾಗುತ್ತಿದೆ. 1200 ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಅಕ್ಕ-ಕೆಫೆ ಕಾರ್ಯಕ್ರಮದ ಭಾಗವಾಗಿ ಈ ಮೇಳದ ಮೈದಾನದಲ್ಲಿನ ಆಹಾರ ಕೋರ್ಟ್‌ ಅನ್ನು “ಅಕ್ಕ-ಕೆಫೆ” ಶೀರ್ಷಿಕೆಯಡಿ ಆಕರ್ಷಣೀಯವಾಗಿ ಆಯೋಜಿಸಲಾಗುತ್ತಿದೆ.

ಬಗೆಬಗೆಯ ಆಹಾರ ಪದಾರ್ಥಗಳ ಮಾರಾಟ:

ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದ ಗಿರ್ಮಿಟ್‌/ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ, ಜೋಳದ ಖಡಕ್‌ ರೊಟ್ಟಿ, ಹೋಳಿಗೆ, ಮಂಗಳೂರ ನೀರ್‌ ದೋಸೆ ಮತ್ತು ಮಾಂಸಹಾರಿ ಆಹಾರಗಳಾದ ಬಂಬೂ ಬಿರಿಯಾನಿ ಮುಂತಾದವುಗಳು ಲಭ್ಯವಿರಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular