ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ, ನನ್ನ ಮೇಲೆ ಕೊಲೆ ಯತ್ನ ನಡೆಯಲಿದೆ ಎಂಬ ಮಾಹಿತಿ ಇದೆ. ಹಾಗಾಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲಿಸರೇ ನನಗೆ ಹೇಳಿದ್ದರು. ಪೊಲೀಸರು ನನಗೆ ಮಾಹಿತಿ ನೀಡಿದ ತಕ್ಷನ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರು ಇದ್ದರು. ಪೊಲೀಸ್ ವಾಹನಗಳು ಕೂಡ ನಿಲುಗಡೆಯಾಗಿತ್ತು. ಅದನ್ನು ಕಂಡು ಯಾಕೆ ಇಷ್ಟೊಂದು ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಎಂದು ಕೇಳಿದಾಗ ಕೊಲೆಗೆ ಯತ್ನ ನಡೆಯಲಿದೆ ಎಂಬ ಮಾಹಿತಿ ಬಂದಿದೆ ಹಾಗಾಗಿ ಭದ್ರತೆ ಕೈಗೊಳ್ಳಲಾಗಿದೆ. ನೀವು ಯಾರ ಬಳಿಯೂ ಹೇಳಬೇಡಿ ಎಂದು ತಿಳಿಸಿದ್ದರು. ಹೀಗೆ ಹೇಳಿದ ಕೆಲ ಸಮಯದಲ್ಲೇ ನನ್ನ ಮೇಲೆ ಮೊಟ್ಟೆ ಎಸೆತ ಘಟನೆ ನಡೆದಿದೆ. ಘಟನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಹನುಮಂತರಾಯಪ್ಪ, ಕುಸುಮಾ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆಯೂ ರಾಜೀನಾಮೆ ಕೊಡಿ ಎಂದು ನನಗೆ ಬೆದರಿಕೆ ಹಾಕಿದ್ದರು. ರಾಜೀನಾಮೆ ಕೊಟ್ರೆ ಜೀವ ಉಳಿಯುತ್ತೆ ಎಂದು ಬೆದರಿಕೆ ಹಾಕಿದ್ದರು. ಬೆದರಿಕೆ ಬಗ್ಗೆ ಪೊಲೀಸರು, ರಾಜ್ಯಪಾಲರು, ಪ್ರಧಾನಮಂತ್ರಿ, ಸಿಬಿಐ ಕಚೇರಿಗಳಿಗೆ ದೂರು ನೀಡಿದ್ದೆನೆ. ಪತ್ರದ ಮೂಲಕ ದೂರು ನೀಡಿದ್ದೇನೆ. ಕೆಲ ತಿಂಗಳ ಹಿಂದೆ ಕೋರ್ಟ್ ಬಳಿ ಲಾಯರ್ ಗಳ ವೇಷದಲ್ಲಿ ಇಬ್ಬರು ಬಂದು ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಅಲ್ಲದೇ ಈ ಘಟನೆಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಹನುಮಂತರಾಯಪ್ಪ, ಕುಸುಮಾ ಅವರೇ ಕಾರಣ. ನನ್ನ ಕೊಲೆಯಾದರೇ ಘಟನೆಗಳಿಗೆ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.