ಬಳ್ಳಾರಿ: ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಜಿಂದಾಲ್ ಕಾರ್ಖಾನೆ ಬೈಪಾಸ್ ಬಳಿ ನಡೆದಿದೆ.
ಆಟೋಮೋಬೈಲ್ ಶಾಪ್, ಎಲೆಕ್ಟ್ರಿಕಲ್ ಅಂಗಡಿ ಹಾಗೂ ಹೋಟೆಲ್ ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಗಳಲ್ಲಿದ್ದ ವಸ್ತುಗಳು, ಹೋಟೆಲ್ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯಿಂದಾಗಿ ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಮೂರು ಅಂಗಡಿಗಳು ಸುಟ್ಟು ಕರಕಲಾಗಿವೆ.
ತೋರಣಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.