ನಾಳೆ ಗಾಂಧೀಜಿ ಪ್ರತಿಮೆ ಅನಾವರಣ, ಸ್ವಾತಂತ್ರ್ಯ ಯೋಧರ ಕುಟುಂಬದವರಿಗೆ ಆಹ್ವಾನ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ 39ನೆಯ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಾಚರಣೆ ದಿನದಿಂದ ದಿನಕ್ಕೆ ಮೆರಗು ಪಡೆಯುತ್ತಿದೆ. ಶತಮಾನೋತ್ಸವದ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯದ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ ಪಾಟೀಲ್ ಸಾಂಕೇತಿಕವಾಗಿ ಸ್ವಾತಂತ್ರ‍್ಯ ಯೋಧರ ಮನೆಗಳಿಗೆ ತೆರಳಿ ಸುವರ್ಣಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಲು ಆಹ್ವಾನ ನೀಡಿದ್ದಾರೆ.

ರಾಮತೀರ್ಥನಗರದಲ್ಲಿರುವ ಅಣ್ಣು ಗುರೂಜಿ ಅವರ ಮನೆಗೆ, ಹನುಮಾನ ನಗರದಲ್ಲಿರುವ ವಿಠ್ಠಲರಾವ್ ಯಾಳಗಿ ಹಾಗೂ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ರೂವಾರಿ ಗಂಗಾಧರರಾವ್ ದೇಶಪಾಂಡೆ ಅವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಆಹ್ವಾನ ನೀಡಿದರು.

ಈ ಕುಟುಂಬದ ಸದಸ್ಯರಿಂದ ಸಚಿವ ಹೆಚ್.ಕೆ.ಪಾಟೀಲ್ ಅವರು ವಿವರವಾದ ಮಾಹಿತಿ ಪಡೆದುಕೊಂಡರು. ಅಶ್ಪೃಶತೆ ನಿವಾರಣೆಗೆ ಗಾಂಧಿಜಿ ಕರೆ ಕೊಟ್ಟ ಕಾಲಘಟ್ಟದಲ್ಲಿ ಬೆಳಗಾವಿ ಅಧಿವೇಶನ ನಡೆಯತ್ತಿತ್ತು. ನಮ್ಮ ಮನೆತನದವರು ಸ್ವಯಂ ಪ್ರೇರಿತರಾಗಿ ಭಂಗಿ ಬಳಿಯಲು ಮುಂದಾದರು. ಹೀಗಾಗಿ ಅವರು ಮುಂಚೂಣಿಯಲ್ಲಿ ಇರಲಿಲ್ಲ ಇದನ್ನು ಈಗ ಊಹಿಸಿಕೊಳ್ಳವುದೂ ಕಷ್ಟ ಎಂದು ಅಣ್ಣೂ ಗುರೂಜೀ ಅವರ ಮೊಮ್ಮಗ ಮಹೇಶ ದೇಶಪಾಂಡೆ ಹೇಳಿದರು.

ಸುತ್ತ ಮುತ್ತಲಿನ ಊರುಗಳ ಜನರು ಗಾಂಧೀಜೀಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದರು ಎಂದು ನಮ್ಮಜ್ಜ ಹೇಳುತ್ತಿದ್ದರು. ನಾವೆಲ್ಲ ಅಜ್ಜನ ನೆರಳಿನಿಂದಲೇ ಬೆಳದವರು. ನಮ್ಮಜ್ಜ ತಲಾಠಿ ನೌಕರಿ ಬಿಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ನಾನು ಈ ಎಲ್ಲ ಮಾಹಿತಿ, ದಾಖಲೆ ಸಂಗ್ರಹಿಸಿರುವೆ ಎಂದರು.

ಇದು ಪುಸ್ತಕ ರೂಪದಲ್ಲಿ ಬರಬೇಕೆಂದು ಸಚಿವರು ದೇಶಪಾಂಡೆ ಅವರಿಗೆ ಸಲಹೆ ಮಾಡಿದರು. ಬೆಳಗಾವಿ ಅಧಿವೇಶನ ಕುರಿತು ಅಣ್ಣು ಗುರೂಜಿ ಬರೆದ ಕಿರು ಪುಸ್ತಕ ಮರು ಮುದ್ರಿಸಲು ಆದೇಶ ನೀಡಿದರು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಹಾಗೂ ಹೋರಾಡಿದ ಯೋಧರನ್ನು ಮರೆಯಬಾರದು. ನೈಜವಾಗಿ ದುಡಿದವರ ಸೇವೆ ಸ್ಮರಿಸಬೇಕು ಇದು ನಮ್ಮ ಕರ್ತವ್ಯ ಎಂದು ಸಚಿವ ಹೆಚ್.ಕೆ.ಪಾಟೀಲ ಅವರು ಹೇಳಿದರು.

ಒಂದೇ ಕುಟುಂಬದ 16 ಜನರ ಜೈಲುವಾಸ:

ನಮ್ಮ ಮನೆಯಲ್ಲಿ 16 ಜನ ಜೈಲು ವಾಸ ಅನುಭವಿಸಿದ್ದಾರೆ. 13 ಜನ ಸ್ವಾತಂತ್ರ್ಯ್ಯಕ್ಕಾಗಿ 3 ಜನ ಗೋವಾ ವಿಮೋಚನೆಗಾಗಿ ಹೋರಾಡಿದ್ದಾರೆ. ಗಾಂಧೀಜಿ ಜೊತೆ ನಮ್ಮ ತಂದೆ ನಿಕಟ ಸಂಪರ್ಕ ಹೊಂದಿದ್ದರು. ಚಿಕ್ಕಪ್ಪ ಬೆಳಗಾವಿಯಲ್ಲಿ ಅಧಿವೇಶನವಾಗಬೇಕೆಂದು ಬಯಸಿದ್ದರು ಆದರೆ 1923 ರಲ್ಲಿ ತೀರಿಕೊಂಡರು. ಲೋಕಮಾನ್ಯ ತಿಲಕರಿಂದ ಸ್ಪೂರ್ತಿ ಪಡೆದಿದ್ದರು. ಗಾಂಧೀಜಿ ಬೆಳಗಾವಿಗೆ ಭೇಟಿ ಕೊಟ್ಟಾಗಲೆಲ್ಲಾ ನಮ್ಮ ಮನೆತನ ಸೇವೆ ಸಲ್ಲಿಸಿದೆ ಎಂದು ವಿಠ್ಹಲರಾವ್ ಯಾಳಗಿ ಅವರು ಹೆಮ್ಮೆಯಿಂದ ಮೆಲಕು ಹಾಕಿದರು.

1942ರಲ್ಲಿ ನಾನು ನಮ್ಮ ತಂದೆ, ನಮ್ಮ ಕಾಕಾ ಎಲ್ಲರನ್ನೂ ಬಂಧಿಸಿ ಜೈಲಿಗೆ ಹಾಕಿದರು. ಬಾಂಬ್ ತಯಾರಿಸುವುದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದು, ಚಾವಡಿ ಸುಡುತ್ತಿದ್ದೆವು ಇದಕ್ಕಾಗಿ ನಮ್ಮನ್ನು ಜೈಲಿಗೆ ಹಾಕಿದರು.

1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಲು ಅಂದು ಗಂಗಾಧರಾವ ದೇಶಪಾಂಡೆ 72 ಸಾವಿರ ರೂ. ಸಂಗ್ರಹಿಸಿದರು. ಅಧಿವೇಶನಕ್ಕೆ ತಗಲುವ ಖರ್ಚನ್ನು ಭರಿಸಲು ಮುಂದಾದರು. ಹುಬ್ಬಳಿಯಲ್ಲಿ ಜರುಗಿದ ಸಭೆಯಲ್ಲಿ ಈ ವಿಷಯವನ್ನು ಮತಕ್ಕೆ ಹಾಕಿದಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಹೆಚ್ಚು ಮತಗಳು ಬಂದವು. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಿತು ಎಂದು ರವೀಂದ್ರ ದೇಶಪಾಂಡೆ(ಗಂಗಾಧರಾವ ದೇಶಪಾಂಡೆ ಅವರ ಮೊಮ್ಮಗ) ಹೇಳಿದರು.

ಸ್ವಾತಂತ್ರ್ಯ ಯೋಧರ ಕುಟುಂಬದ ಸದಸ್ಯರು ಮಹಾತ್ಮ ಗಾಂಧಿಜಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಲು ಸರ್ಕಾರದ ಪರವಾಗಿ ಸಚಿವರು ಹೆಚ್. ಕೆ. ಪಾಟೀಲರು ಆಹ್ವಾನ ನೀಡಿದರು.

ನಂತರ ಸಚಿವ ಎಚ್.ಕೆ.ಪಾಟೀಲರು ಸುವರ್ಣಸೌಧಕ್ಕೆ ತೆರಳಿ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ ಸಿದ್ಧತೆಯನ್ನು ಪರಿಶಿಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮತ್ತಿತರು ಹಾಜರಿದ್ದರು.

ಡಿ. 26, 27ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾವೇಶ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read